UN NETWORKS
ಇನೋಳಿ: ಇಂದಿನ ಮಕ್ಕಳಿಗೆ ಧಾರ್ಮಿಕ ಚಿಂತನೆ ಮೂಡಿಸುವವರ ಕೊರತೆಯಿದೆ, ಈ ಕಾರಣದಿಂದ ಕಿರಿಯರಿಂದ ಹಿರಿಯರಿಗೆ ನೀಡುವ ಗೌರವ ಕಡಿಮೆಯಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಲ್ಲೂ ಯುವಜನತೆ ಭಾಗವಹಿಸುವುದು ಕಡಿಮೆಯಾಗಿದೆ ಎಂದು ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಅಭಿಪ್ರಾಯಪಟ್ಟರು.
ಇನೋಳಿ ದೇವಂದಬೆಟ್ಟು ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದು ನಮ್ಮಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ತತ್ಸಂಗಳ ಮೂಲಕ ದೇಶ ಮುಂದುವರಿಯುತ್ತಿದ್ದು, ಹಿರಿಯರು ನೀಡಿರುವ ಬಳುವಳಿಯಾಗಿದೆ. ಭಜನೆ, ತತ್ಸಂಗದಿಂದ ಶಿವನ ಅನುಗ್ರಹ ಪ್ರಾಪ್ತಿಸಲಿದೆ. ಧಾರ್ಮಿಕ ಚಿಂತನೆ ಉಳಿಯಬೇಕಾದರೆ ಮಕ್ಕಳಿಗೆ ವಿದ್ಯೆ ಜೊತೆ ಸಂಸ್ಕಾರವೂ ನೀಡಬೇಕಿದೆ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಮಾತನಾಡಿ, ಶಿವನಿಗೆ ತಂಪು ಪರಿಸರ ಅಗತ್ಯವಿದೆ. ಇನೋಳಿ ಸೋಮನಾಥೇಶ್ವರ ದೇವಸ್ಥಾನದಲ್ಲಿ ಹತ್ತು ಎಕರೆ ಜಮೀನು ಇದೆ. ನೀರು, ಮಣ್ಣು,ಪರಿಸರ ಉಳಿವಿಗೆ ಸನಾತನ ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಎನ್ಎಸ್ಎಸ್ ಶಿಬಿರ, ಕ್ಷೇತ್ರ ಭೇಟಿಗೆಂದು ಆಗಮಿಸುವ ವಿದ್ಯಾರ್ಥಿಗಳು, ಸ್ಥಳೀಯರ ಸಂಘ-ಸಂಸ್ಥೆಗಳು ದೇವಳ ಪರಿಸರದಲ್ಲಿ ಗಿಡಗಳನ್ನು ನೆಡುವ ಮುಖಾಂತರ ಹಸಿರುಮಯಗೊಳಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಭಜನಾ ಸೇವಾಕರ್ತೆ ಲೀಲಾವತಿ ನಾಟ್ರಕೋಡಿ ಅವರನ್ನು ಸನ್ಮಾನಿಸಲಾಯಿತು.
ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಪುದು ಜಿಲ್ಲಾ ಪಂಚಾಯಿತಿ ಸದಸ್ಯೆ ರವೀಂದ್ರ ಕಂಬಳಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವಕ್ತಾರ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ, ಜಿಲ್ಲಾ ಕುಷ್ಠರೋಗ, ಅಂಧತ್ವ ಮತ್ತು ಮಾನಸಿಕ ಆರೋಗ್ಯಾಧಿಕಾರಿ ಡಾ.ರತ್ನಾಕರ ಮುಖ್ಯ ಅತಿಥಿಗಳಾಗಿದ್ದರು. ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಪಾವೂರು ಗ್ರಾಮ ಪಂಚಾಯಿತಿ ಸದಸ್ಯ ವಾಮನ್ರಾಜ್, ಮೊಕ್ತೇಸರರಾದ ಗೋಪಾಲ ಶೆಟ್ಟಿ ಬಾರ್ಲ, ಪ್ರಭಾಕರ ನಾಯಕ್ ಕೊಪ್ಪಲ, ಶಿವಪ್ಪ ಪಜಿಲ, ಸತೀಶ್ ಶೆಟ್ಟಿ ಇನೋಳಿಬೀಡು, ಪ್ರಮುಖರಾದ ವೇಣುಗೋಪಾಲ ಕೋರ್ಯ ಮೊದಲಾದವರು ಉಪಸ್ಥಿತರಿದ್ದರು.
ಮೊಕ್ತೇಸರ ಡಾ.ಸುಧಾರಾಮ ರೈ ಕೊಪ್ಪರಿಗೆ ಸ್ವಾಗತಿಸಿದರು. ರಾಜೇಶ್ ಶೆಟ್ಟಿ ಪಜೀರುಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಇನೋಳಿ ವಂದಿಸಿದರು. ರವಿ ರೈ ಪಜೀರು ಕಾರ್ಯಕ್ರಮ ನಿರೂಪಿಸಿದರು.


