UN NETWORKS
ಉಳ್ಳಾಲ: ಕರ್ನಾಟಕ ರಾಜ್ಯ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಮಂಗಳೂರು ದಕ್ಷಿಣ ವಲಯ ವತಿಯಿಂದ ಇಂದು ಮಂಗಳೂರಿನ ಚಿನ್ಮಯ ಪ್ರೌಢಶಾಲೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಕಾರ್ಯಗಾರ ಹಾಗೂ ಈಗಾಗಲೇ ವರ್ಗಾವಣೆಗೊಂಡಿರುವ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಜ್ಞಾನೇಶ್ ಎಂ.ಪಿ. ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ. ಖಾದರ್ ಅವರು ಒಬ್ಬ ವ್ಯಕ್ತಿ ತನ್ನ ಕರ್ತವ್ಯವನ್ನು ನಿಷ್ಠೆ ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸಿದಾಗ ಸಮಾಜವೇ ಅವರನ್ನು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ. ಹಾಗೆಯೇ ನಮ್ಮ ದಕ್ಷಿಣ ವಲಯದಲ್ಲಿ ಜ್ಞಾನೇಶ್‍ರವರು ಎಲ್ಲರನ್ನೂ ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮುಖೇನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಾಗಾಗಿ ವರ್ಗಾವಣೆಗೊಂಡರೂ ಅವರನ್ನು ವಿವಿಧ ಸಂಘಗಳು ಅವರ ಸೇವೆಯನ್ನು ಪರಿಗಣಿಸಿ ಗೌರವಿಸುತ್ತಿದೆ. ಇದು ಅಭಿನಂದನೀಯವೆಂದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನುರವರು ಕಾರ್ಯಗಾರವನ್ನು ಉದ್ಘಾಟಿಸಿ ಶಿಸ್ತುವನ್ನು ರೂಪಿಸುವಲ್ಲಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಹಿರಿದು ಮತ್ತು ವಿದ್ಯಾರ್ಥಿಗಳಿಗೂ ದೈಹಿಕ ಶಿಕ್ಷಣ ಶಿಕ್ಷಕರೆಂದರೆ ತುಂಬಾ ಅಚ್ಚುಮೆಚ್ಚು ಎಂದರು. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಜ್ಞಾನೇಶ್‍ರವರು ಎಲ್ಲಾ ಅಧ್ಯಾಪಕರ ಸಹಕಾರದಿಂದ ಎಲ್ಲಾ ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಯಿತು. ಅದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ ನೂತನ ಬಿ.ಇ.ಒ. ರವರಾದ ಲೋಕೇಶ್‍ರವರು ತಾಲೂಕಿನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸುವುದರೊಂದಿಗೆ ಶಿಕ್ಷಕರ ಸಹಕಾರ ಮತ್ತು ಕರ್ತವ್ಯನಿಷ್ಠೆಯಿಂದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವೆಂದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯವರಾದ ಗುರುನಾಥ ಬಿ. ಬಾಗೇವಾಡಿಯವರು ಶುಭವನ್ನು ಹಾರೈಸಿದರು. ಪ್ರಾಸ್ತಾವಿಕದೊಂದಿಗೆ ಸ್ವಾಗತವನ್ನು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ತ್ಯಾಗಂ ಹರೇಕಳ ಮಾಡಿದರು. ತರಬೇತುದಾರರಾದ ಶಾಂತರಾಮ ರೈ, ಸಿದ್ದರೂಢ ಪೂಜಾರಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಲೋಕನಾಥ ರೈ, ಸಂಘದ ಪದಾಧಿಕಾರಿಗಳಾದ ಲಿಲ್ಲಿ ಪಾಯಸ್, ಲ್ಯಾನ್ಸಿ ಸಿಕ್ವೇರಾ, ಡೋಲ್ಫಿ ಸಿಕ್ವೇರಾ, ಶಾಲಾ ಮುಖ್ಯೋಪಾಧ್ಯಾಯಿನಿ ಪೂರ್ಣಿಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಮತ್ತು ಶೇಖರ್ ಕಡ್ತಲ ಅನಿಸಿಕೆ ವ್ಯಕ್ತ ಪಡಿಸಿದರು. ಕಾರ್ಯದರ್ಶಿ ರಾಜೀವ್ ನಾಯಕ್ ವರದಿ ವಾಚಿಸಿದರು. ಮೋಹನ್ ಶಿರ್ಲಾಲ್ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಗೈದರು. ದೈಹಿಕ ಶಿಕ್ಷಣ ಶಿಕ್ಷಕರಾದ ವಿಷ್ಣು ಹೆಬ್ಬಾರ್ ವಂದಿಸಿದರು.


