UN NETWORKS
ಉಳ್ಳಾಲ: ಶಾರದಾ ಸಮೂಹ ಸಂಸ್ಥೆಗಳು ಪ್ರೊ| ಎಂ.ಬಿ. ಪುರಾಣಿಕ್ ನೇತೃತ್ವದಲ್ಲಿ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ಗಮನ ಸೆಳೆಯುತ್ತಿದ್ದು, ಇದೀಗ ದ್ರವತ್ಯಾಜ್ಯ ಘಟಕ ಸ್ಥಾಪನೆ ಮಾಡುವ ಮೂಲಕ ಇನ್ನೊಮ್ಮೆ ಮಾದರಿ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಯನ್ನು ಪಡೆದಂತಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ಆವರಣದಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎರಡನೆಯ ಅತಿ ದೊಡ್ಡ 10ಲಕ್ಷ ಲೀ. ಸಾಮರ್ಥ್ಯದ ದ್ರವ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಹಲವು ವಸತಿ ವಾಣಿಜ್ಯ ಸಂಕೀರ್ಣಗಳು ತಂದೊಡ್ಡುವ ಸಮಸ್ಯೆಗಳು ನಮ್ಮ ಕಣ್ಣ ಮುಂದೆ ಇರುವಾಗ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯೊಂದು ಇಂತಹ ಒಂದು ಮಹತ್ವದ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ನೂತನ ಘಟಕ ನಿರ್ಮಾಣದಿಂದ ಈ ಭಾಗದಲ್ಲಿ ಸುಂದರ ಪರಿಸರ ಸೃಷ್ಟಿಯಾಗಲಿದೆ ಎಂದ ಅವರು ಯಾವುದೇ ಸಮಸ್ಯೆಗಳು ಸವಾಲುಗಳಿದ್ದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು, ಆ ಮೂಲಕ ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡಬೇಕು ಎಂಬ ಗುರಿಯೊಂದಿಗೆ ಪೋಷಕರು ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಿದ್ದು ಮಕ್ಕಳು ಪೋಷಕರ ಕನಸು ನನಸು ಮಾಡಬೇಕು. ಈ ನಿಟ್ಟಿನಲ್ಲಿ ಶಾರದಾ ವಿದ್ಯಾನಿಕೇತನದಂತಹ ಶಿಕ್ಷಣ ಸಂಸ್ಥೆಯಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈಗಾಗಲೇ ಕೆ.ಸಿ. ರೋಡು ಫಲಾಹ್ ಶಾಲೆಯಿಂದ ದೇವಿನಗರ ರಸ್ತೆಗೆ 80ಲಕ್ಷ ರೂ. ಅನುದಾನ ಮಂಜೂರಾಗಿದೆ. ಅಲಂಕಾರಗುಡ್ಡೆ ದೈವಸ್ಥಾನ ರಸ್ತೆಗೂ ಅನುದಾನ ಮಂಜೂರು ಮಾಡಲಾಗಿದ್ದು ಎರಡೇ ದಿನದ ಅಂತರದಲ್ಲಿ ಡಾಮರೀಕರಣ ಕಾರ್ಯ ನಡೆಯಲಿದೆ. ಅಂತಹ ಕೆಲಸಗಳಿಂದ ನಗರದಲ್ಲಿ ಸಿಗುವ ಸೌಲಭ್ಯ ಗ್ರಾಮೀಣ ಭಾಗದಲ್ಲಿ ಸಿಗುವ ಅವಕಾಶದ ಫಲದಿಂದ ಜನರು ನಗರದತ್ತ ವಲಸೆ ಹೋಗುವುದನ್ನು ತಡೆಯಲು ಸಾಧ್ಯ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ ಮೌಲ್ಯಾಧಾರಿತ ಶಿಕ್ಷಣ ಹಾಗೂ ಎಲ್ಲಾ ಸೌಲಭ್ಯ ಒದಗಿಸಿಕೊಟ್ಟಿರುವುದರಿಂದ ಶಾರದಾ ಶಿಕ್ಷಣ ಸಂಸ್ಥೆ ಹೆಸರು ಪ್ರಸಿದ್ಧಿ ಪಡೆದಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ, ಘಟಕ ನಿರ್ಮಿಸಿದ ಚಿಲಿಂಬಿಯ ಗ್ರೀನ್ ಟೆಕ್ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ್, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಸುಷ್ಮಾ ದಿನಕರ್, ಕಟ್ಟಡ ಗುತ್ತಿಗೆದಾರ ದಿವಾಕರ್ ಹಾಗೂ ಸಂಸ್ಥೆಯ ಆಡಳಿತಾಧಿಕಾರಿ ವಿವೇಕ್ ತಂತ್ರಿ ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆಯ ಅಧ್ಯಾಪಕ ಶಿವಪ್ರಸಾದ್ ಸ್ವಾಗತಿಸಿದರು. ಶುಭಕರ್ ವಂದಿಸಿದರು.


