UN NETWORKS
ಕೊಣಾಜೆ: ಭಜನೆಯು ನಿರಂತರವಾಗಿ ನಡೆಯುತ್ತಿದ್ದರೆ ಅಲ್ಲಿ ವಿಭಜನೆ ಖಂಡಿತಾ ಸಾಧ್ಯವಿಲ್ಲ. ಭಜನೆ ಹಾಗೂ ಧಾರ್ಮಿಕತೆಯು ಸಮಾಜದಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವುದರೊಂದಿಗೆ ಸಾಮರಸ್ಯತೆಯನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಅವರು ಹೇಳಿದರು.
ಅವರು ಪಟ್ಟೋರಿಯಲ್ಲಿ ನಾಗಬ್ರಹ್ಮ ಭಜನಾ ಮಂಡಳಿ ಹಾಗೂ ಅಖಂಡ ಭಜನಾ ಸಪ್ತಾಹ ಸಮಿತಿ ಆಶ್ರಯದಲ್ಲಿ ನಡೆದ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಇಂದಿನ ಆಧುನಿಕ ಸಮಾಜದಲ್ಲಿ ಯುವ ಸಮುದಾಯ ಭಜನೆಯಂತಹ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡಿದರೆ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಪಟ್ಟೋರಿಯ ನೆಲದಲ್ಲಿ ಕಳೆದ ಒಂದು ವಾರದಿಂದ ನಡೆಯುವ ಅಖಂಡ ಭಜನಾ ಸಪ್ತಾಹವು ಈ ನೆಲಕ್ಕೆ ಧಾರ್ಮಿಕ ಶಕ್ತಿಯನ್ನು ಒದಗಿಸಿಕೊಟ್ಟಿದ್ದು ಇಂತಹ ಮಾದರಿ ಕಾರ್ಯಗಳು ನಿರಂತರವಾಗಿ ಎಲ್ಲೆಡೆಯೂ ನಡೆಯುವಂತಾಗಬೇಕು ಎಂದು ಹೇಳಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಳ್ಳಾಲ ಕಾಂಗ್ರೆಸ್‍ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಪುಲ್ಲು ಅವರು, ಭಜನೆಯಂತಹ ಕಾರ್ಯಕ್ರಮಗಳು ನಮಗೆ ಧರ್ಮದ ತಿರುಳನ್ನು ಅರ್ಥೈಸಿಕೊಡುತ್ತದೆ. ಇಂತಹ ಕಾರ್ಯಕ್ಕೆ ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ಬಡಾಜೆ ಬೀಡಿನ ಶ್ರೀ ಗೋಪಾಲಕೃಷ್ಣ ತಂತ್ರಿ ಅವರು, ಶಂಖನಾದ, ಭಜನೆ ಇರುವಂತಹ ಮನೆಯಲ್ಲಿ ಎಂದಿಗೂ ಕಲಹವಿರುವುದಿಲ್ಲ, ಜೊತೆಗೆ ಭಜನೆ ನಿರಂತರವಾಗಿ ನಡೆಯುವಲ್ಲಿ ಸಾನಿಧ್ಯವೂ ವೃದ್ಧಿಯಾಗುತ್ತದೆ. ಪ್ರಮುಖವಾಗಿ ಸಂಬಂಧಗಳು, ಸಂಸ್ಕೃತಿಯ ವಿಚಾರಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ವಿಶ್ವಹಿಂದೂ ಪರಿಷತ್‍ನ ಗೋಪಾಲ್ ಕುತ್ತಾರ್, ಅಖಂಡ ಭಜನಾ ಸಪ್ತಾಹ ಸಮಿತಿ ಅಧ್ಯಕ್ಷರಾ ರಘುರಾಮ ಕಾಜವ, ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಹರೇಕಳ, ಅಖಂಡ ಭಜನಾ ಸಪ್ತಾಹ ಸಮಿತಿಯ ರಾಮಕೃಷ್ಣ ಪಟ್ಟೋರಿ, ಸತ್ಯನಾರಾಯಣ ಭಟ್ ಕೊಣಾಜೆ ಬೀಡು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರವೀಣ್ ಪಟ್ಟೋರಿ ಸ್ವಾಗತಿಸಿ, ರವೀಂದ್ರ ಪಟ್ಟೋರಿ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.
ನಾವು ಸಂಸ್ಕಾರವಂತರಾಗುವುದರೊಂದಿಗೆ ನಮ್ಮ ಮಕ್ಕಳಿಗೂ ಸಂಸ್ಕøತಿ ಸಂಸ್ಕಾರಗಳನ್ನು ತಿಳಿಯ ಪಡಿಸುವ ಕೆಲಸ ಮಾಡುವ ಕಾರ್ಯ ಇಂದಿನ ಪ್ರಸ್ತುತತೆಯಲ್ಲಿ ಬಹಳ ಅಗತ್ಯವಾಗಿದೆ. ತಂದೆ ತಾಯಿಯಂದಿರು ತಮ್ಮ ಮಕ್ಕಳ ಬದುಕನ್ನು ಉತ್ತಮಗೊಳಿಸಬೇಕಾದರೆ ಟಿವಿ, ದಾರಾವಾಹಿ ಎಂದು ಸಮಯ ವ್ಯರ್ಥ ಮಾಡುವ ಬದಲು ಮಕ್ಕಳಿಗೆ ಬದುಕಿನ ಮೌಲ್ಯಗಳನ್ನು ತಿಳಿಸಿಕೊಡಬೇಕು.
ಶ್ರೀ ಗೋಪಾಲಕೃಷ್ಣ ತಂತ್ರಿ, ಬಡಾಜೆಬೀಡು



