UN NETWORKS
ಉಳ್ಳಾಲ: ಒಂಟಿ ಮಹಿಳೆಯಿದ್ದ ಮನೆಯೊಳಗೆ ನುಗ್ಗಿ ಆಕೆಯನ್ನು ಬೆದರಿಸಿ ಚಿನ್ನದ ಸರ ದರೋಡೆಗೈದು ತಲಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಸುಂದರಿಭಾಗ್ ನಿವಾಸಿ ಕಳ್ಳ ರಮೀಝ್ ಯಾನೆ ಲೆಮನ್ ಟೀ ರಮೀಝ್ (26) ಬಂಧಿತ. ರೌಡಿಶೀಟರ್ ಆಗಿರುವ ಈತನ ವಿರುದ್ಧ ಹಲವು ಕಳವು ಪ್ರಕರಣಗಳಿವೆ.
ಡಿ. 1 ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ಸುಭಾಷನಗರದ ಪುಷ್ಪ ರೆಡ್ಡಿ (70) ಎಂಬವರು ಮನೆಯಲ್ಲಿ ಒಬ್ಬರೇ ಇದ್ದಾಗ ರಮೀಝ್ ಮತ್ತು ತಂಡ ಮನೆಯೊಳಗೆ ನುಗ್ಗಿ ವೃದ್ಧ ಮಹಿಳೆಯನ್ನು ಬೆದರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದರೋಡೆ ನಡೆಸಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಹಿಂದೆಯೇ ಬಂಧಿಸಲಾಗಿತ್ತು. ರಮೀಝ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಸುಲಿಗೆ ಮತ್ತು ಕಳವು ಪ್ರಕರಣಗಳಿವೆ.
ಆರೋಪಿಗಳು ದರೋಡೆಗೈದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


