UN NETWORKS
ಉಳ್ಳಾಲ: ರಾಜಕೀಯ, ಧಾರ್ಮಿಕ ವಿಚಾರಗಳಿಗೆ ಮಡಿದವರ ನಡುವೆ ದೇಶಕ್ಕಾಗಿ ಪ್ರಾಣ ಅರ್ಪಿಸಿದವರು ಶ್ರೇಷ್ಟರಾಗಿದ್ದು, ಅವರ ಹೆಸರಿನಲ್ಲಿ ಆಚರಿಸುವ ಹುತಾತ್ಮ ದಿನಾಚರಣೆ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇಂತಹ ಆಚರಣೆಗಳಿಂದ ಯುವಸಮುದಾಯ ಸೈನ್ಯಕ್ಕೆ ಸೇರಲು ಸ್ಫೂರ್ತಿದಾಯಕ ಬೆಳವಣಿಗೆಯಾಗಲಿ ಎಂದು ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ)ಯ ಉಪಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.
ಅವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಸೆಮಿನಾಡರ್ ಹಾಲ್ನಲ್ಲಿ ನಿಟ್ಟೆ (ಪರಿಗಣಿಸಲಾಗಿರುವ) ವಿಶ್ವವಿದ್ಯಾನಿಲಯದ ಎನ್ಎಸ್ಎಎಸ್ ಘಟಕದ ಆಶ್ರಯದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ನಿವೃತ್ತ ಸೇನಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದರು.
ಸೈನ್ಯದಲ್ಲಿರುವವರ ಮನೆಮಂದಿಗೆ ಬರುವ ಒಂದು ದೂರವಾಣಿ ಕರೆಯೂ ಭೀತಿಯನ್ನು ಹುಟ್ಟಿಸುವಂತಹದ್ದಾಗಿರುತ್ತದೆ. ಹಿಂದೆ ದಕ್ಷಿಣ ಭಾರತದ ಮದ್ರಾಸ್ ರೆಜಿಮೆಂಟ್ ಭಾರತೀಯ ಸೇನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿಕೊಂಡಿತ್ತು. ಈ ಮುಖೇನ ದಕ್ಷಿಣ ಭಾರತದ ಮಂದಿಯ ದೇಶಕ್ಕಾಗಿ ನಡೆಸಿದ ಸೇವೆ ನಗಣ್ಯ ಎಂದ ಅವರು ನರ್ಸಿಂಗ್ ಪದವಿ ಪಡೆದವರಿಗೆ ಸೈನ್ಯದಲ್ಲಿ ಸೇವೆ ನಡೆಸಲು ಉತ್ತಮ ಅವಕಾಶಗಳಿದ್ದು, ಭವಿಷ್ಯದಲ್ಲಿ ಸೈನ್ಯದ ಉನ್ನತ ಹುದ್ದೆಗಳನ್ನು ಗಳಿಸಿಕೊಂಡು ಕಾರ್ಯ ನಿರ್ವಹಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಭೂ ಸೇನೆಯ ಕರ್ನಲ್ ಪ್ರೇಮ್ ಕುಮಾರ್ ಶೆಟ್ಟಿ , ನೌಕಾದಳದ ಕಮಾಂಡರ್ ಮಹೇಶ್ ನಾಯಕ್, ವಾಯುಸೇನೆಯ ಶ್ರೀಕಾಂತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭೂ ಸೇನೆಯ ಕರ್ನಲ್ ಪ್ರೇಮ್ ಕುಮಾರ್ ಶೆಟ್ಟಿ ಹಲವು ವರ್ಷಗಳ ಪರಿಶ್ರಮ ಮತ್ತು ಅಭ್ಯಾಸದ ಫಲವಾಗಿ ಕೆಲ ತಿಂಗಳ ಹಿಂದೆ ದೇಶದ ಯೋಧರು ಸರ್ಜಿಕಲ್ ಸ್ಟ್ರೈಕ್ ನಡೆಸಿ ಯಶಸ್ವಿಯಾಗಿದ್ದಾರೆ. ಹಳೇಯ ಮತ್ತು ಶ್ರೇಷ್ಠ ವೃತ್ತಿಯಾಗಿರುವ ಸೈನ್ಯದಲ್ಲಿ ಯುವಸಮುದಾಯ ಹೆಚ್ಚಿನ ಒಲವು ತೋರಿಸಿ, ದೇಶದ ಸೇವೆಯಲ್ಲಿ ಭಾಗಿಯಾಗುವುದರಿಂದ ಸವಾಲುಗಳನ್ನು ಸ್ವೀಕರಿಸುವ ಮನೋಭಾವದ ಜತೆಗೆ ಪ್ರತಿಯೊಂದು ವೃತ್ತಿಯಲ್ಲಿ ತೊಡಗುವ ಅನುಭವವನ್ನು ಕೊಡುತ್ತದೆ ಎಂದರು.
ನೌಕಾದಳದ ಕಮಾಂಡರ್ ಮಹೇಶ್ ನಾಯಕ್, ಮಾತನಾಡಿ ಸೈನ್ಯದಲ್ಲಿನ ವೈದ್ಯರ ಸೇವೆ ಸಾಹಸದಾಯಕವಾಗಿರುತ್ತದೆ. ಯುದ್ಧ ಭೂಮಿಯಲ್ಲಿ ಸಣ್ಣ ಕೊಠಡಿಯೇ ಹೊರರೋಗಿ ವಿಭಾಗದಿಂದ ಶಸ್ತ್ರಚಿಕಿತ್ಸೆ ವಿಭಾಗವೂ ಕಾರ್ಯಾಚರಿಸಿ, ಅದರಲ್ಲೇ ವೈದ್ಯರು ಕಾರ್ಯನಿರ್ವಹಿಸಬೇಕಾಗಿದೆ. ಪ್ರತಿಕೂಲ ಹವಾಮಾನದಲ್ಲೂ ವೈದ್ಯರು ನಡೆಸುವ ಸೇವೆ ಬಹಳಷ್ಟು ಶ್ರೇಷ್ಟವಾಗಿದೆ ಎಂದರು.
ವಾಯುಸೇನೆಯ ಶ್ರೀಕಾಂತ್ ಶೆಟ್ಟಿ ಮಾತನಾಡಿ ಮಾಧ್ಯಮಗಳಲ್ಲಿ ಕಂಡುಬರುವಂತೆ ಸೇನೆಯ ಕಾರ್ಯವೈಖರಿಯಿರುವುದಿಲ್ಲ. ದೇಶಕ್ಕಾಗಿ ಕಾಯುವ ಸಮಯಗಳು, ಅಲ್ಲಿನ ಸ್ಥಳಗಳ ಕಷ್ಟದ ಜತೆಗೆ ಮನೆಮಂದಿಯೊಂದಿಗೆ ಇರದ ಸಂಪರ್ಕಗಳ ನಡುವಿನ ಹೋರಾಟವೇ ಬೇರೆ. ಯೋಧರೆಂದರೆ ಯುದ್ಧದಲ್ಲಿ ಭಾಗಿಯಾಗಿರಬೇಕೆಂಬ ಮನೋಭಾವ ಹಲವರಲ್ಲಿರುತ್ತದೆ. ಆದರೆ ಭಾರತೀಯ ಸೇನೆ ಎಂದಿಗೂ ಯುದ್ಧವನ್ನೇ ಪ್ರೇರೇಪಿಸುವುದಿಲ್ಲ. ಸೈನ್ಯಕ್ಕೆ ಸೇರಿದ ಎಲ್ಲರೂ ವಿವಿಧ ರೀತಿಯಲ್ಲಿ ಸೇವೆ ನಡೆಸಿಯೇ ಬಂದವರಾಗಿರುತ್ತಾರೆ ಎಂದರು.

ಈ ಸಂದರ್ಭದಲ್ಲಿ ನಿಟ್ಟೆ (ಪರಿಗಣಿಸಲಾಗಿರುವ) ವಿಶ್ವವಿದ್ಯಾನಿಲಯದ ಕುಲಸಚಿವೆ ಅಲ್ಕಾ ಕುಲಕರ್ಣಿ, ನಿಟ್ಟೆ ಸಂಶೋಧನ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ| ಕರುಣಾ ಸಾಗರ್, ಕ್ಷೇಮ ಡೀನ್ ಡಾ| ಪಿ.ಎಸ್.ಪ್ರಕಾಶ್, ಆಡಳಿತ ವಿಭಾಗದ ವೈಸ್ ಡೀನ್ ಡಾ| ಜಯಪ್ರಕಾಶ್ ಶೆಟ್ಟಿ, ಆಡಳಿತ ವಿಭಾಗದ ಉಪ ನಿರ್ದೇಶಕಿ ಸಾಯಿಪ್ರಸನ್ನ ಹೆಗ್ಡೆ, ಪರ್ಚೇಸ್ ವಿಭಾಗದ ಉಪ ನಿರ್ದೇಶಕ ಸುಬೋದ್ ರೈ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಫಾತಿಮಾ ಡಿ’ಸಿಲ್ವ, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ| ಸಿ.ಎಸ್. ಶಾಸ್ತ್ರಿ, ವೈದ್ಯಕೀಯ ಅಧೀಕ್ಷಕ ಮೇಜರ್ ಡಾ| ಶಿವಕುಮಾರ್ ಹೀರೆಮಠ್, ವಿದ್ಯಾರ್ಥಿ ಕ್ಷೇಮಪಾಲನಾ ಉಪ ನಿರ್ದೇಶಕ ಕರ್ನಲ್ ಸುಬ್ಬಯ್ಯ, ಎಸ್ಟೇಟ್ ಮ್ಯಾನೇಜ್ಮೆಂಟ್ನ ಸಹಾಯಕ ನಿರ್ದೇಶಕ ಏರ್ ಕಮಾಡೋರ್ ಎಸ್.ಕೆ. ಪೈ ಮತ್ತಿತರರು ಉಪಸ್ಥಿತರಿದ್ದರು.
ನಿಟ್ಟೆ (ಪರಿಗಣಿಸಲಾಗಿರುವ) ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ| ಸುಮಲತಾ ಹೆಗ್ಢೆ ಸ್ವಾಗತಿಸಿದರು. ನುಕ್ಸರ್ನ ಎನ್ಎಸ್ಎಸ್ ಯೋಜನಾಧಿಕಾರಿ ಕೃಷ್ಣ ಕುಮಾರ್ ವಂದಿಸಿದರು. ನಿಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.


