UN NETWORKS
ಉಳ್ಳಾಲ: ಅಂತಾರಾಜ್ಯ ಬೃಹತ್ ಜಾನುವಾರು ಸಾಗಾಟ ಜಾಲವನ್ನು ಬೇಧಿಸಿರುವ ಉಳ್ಳಾಲ ಪೊಲೀಸರು 20 ಕೋಣ , ಎಮ್ಮೆಗಳ ಸಹಿತ ಇಬ್ಬರು ಆರೋಪಿಗಳನ್ನು ಸಾಗಾಟಕ್ಕೆ ಬಳಸಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳದ ಚೆಂಗಳದ ಚೇರ್ಕಳ ನಿವಾಸಿ ದಿವಾಕರನ್ ನಾಯರ್ (47) ಮತ್ತು ತೆಕ್ಕಿಲ್ ನಿವಾಸಿ ತೈನುಲ್ ಅಬಿದಿನ್ (33) ಬಂಧಿತರು. ಇಬ್ಬರು ಸೋಲಾಪುರದಿಂದ ಕೇರಳ ಕಡೆಗೆ ಬೃಹತ್ ಗಾತ್ರದ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕೋಣ ಮತ್ತು ಎಮ್ಮೆಗಳನ್ನು ಕೂಡಿ ಹಾಕಿ ಕೊಂಡೊಯ್ಯುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು , ಕೋಟೆಕಾರು ಚೆಕ್ ಪೋಸ್ಟ್ ಸಮೀಪ ಗುರುವಾರ ನಸುಕಿನ ಜಾವ ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ದಾಖಲೆಗಳಿಲ್ಲದೆ ರಾತ್ರೋರಾತ್ರಿ ಜಾನುವಾರು ಸಾಗಾಟ ನಡೆಸುತ್ತಿದ್ದು, ಸೋಲಾಪುರದ ಹಳ್ಳಿಗಳಿಂದ ಕಳವು ನಡೆಸಿ ಜಾನುವಾರು ಸಾಗಾಟ ನಡೆಸುತ್ತಿರುವುದಾಗಿ ಸಂಶಯಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸರು ವಶಪಡಿಸಿಕೊಂಡ ಲಾರಿ ರೂ. 15 ಲಕ್ಷ, ಜಾನುವಾರು ರೂ. 4ಲಕ್ಷ ಮತ್ತು 11,000 ನಗದು ಸೇರಿದಂತೆ ಒಟ್ಟು 19 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ ಐ ವಿನಾಯಕ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.


