ಉಳ್ಳಾಲ: ಯುವ ಸಮುದಾಯವು ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ, ಯಶಸ್ವಿಯಾಗದೇ ಅರ್ಧದಲ್ಲೇ ನಿಂತು ಹೋಗಲು ಅವರಲ್ಲಿರುವ ಸಂಕುಚಿತ ಭಾವನೆ ಅಥವಾ ಕೀಳರಿಮೆಯಿಂದ ಆಗುತ್ತಿದ್ದು, ಇದಲ್ಲದೆ ಹಿರಿಯರೊಂದಿಗೆ ಅಥವಾ ಪರಿಣತರೊಂದಿಗೆ ಸಮಾಲೋಚನೆ ಮಾಡದೆ ತುರ್ತಾಗಿ ತೋಚಿದ್ದನ್ನು ಕಾರ್ಯ ರೂಪಕ್ಕೆ ತರುವುದರಿಂದ ಅನಾಹುತಗಳಿಗೆ ಕಾರಣವಾಗುತ್ತದೆ ಎಂದು ಉಳ್ಳಾಲ ಸಯ್ಯದ್ ಮದನಿ ಅರೆಬಿಕ್ ಕಾಲೆಜಿನ ಪ್ರೊ. ಅಲ್‍ಹಜ್ ಅಹ್ಮದ್ ಬಾವಾ ಮುಸ್ಲಿಯಾರ್ ಹೇಳಿದರು.
ಅವರು ಹಳೇಕೋಟೆ ಮುರ್ಖಲ್ ಇಸ್ಲಾಂ ಮದರಸದ ಹಳೆ ವಿದ್ಯಾರ್ಥಿ ಸಂಘವು ಇತ್ತೀಚೆಗೆ ಏರ್ಪಡಿಸಿದ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸ. ಸ ರವರು ಇಡೀ ಜಗತ್ತಿಗೆ ಮಾರ್ಗದರ್ಶಕರು ಅವರು ಯಾವುದೇ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವಾಗಲೂ ಸಹಚರರೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದರಿಂದ ಜಗತ್ತಿಗೆ ನೀಡುವ ಶ್ರೇಷ್ಟ ಬೋಧನೆಯಾಗುತ್ತಿತ್ತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಕೇಂದ್ರ ಜುಮ್ಮಾ ಮಸ್ಜಿದ್‍ನ ಅಧ್ಯಕ್ಷ ಅಲ್‍ಹಾಜ್ ಯು. ಎಸ್. ಹಂಝ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಉಪಸ್ಥಿತರಿದ್ದರು. ಈ ಸಂದರ್ಭ ನೌಫಲ್ ಸಖಾಫಿ ಕಳಸ ಹಾಗೂ ಪೆರೋಡ್ ಬಶೀರ್ ಮುಸ್ಲಿಯಾರ್ ಧಾರ್ಮಿಕ ಉಪನ್ಯಾಸ ನೀಡಿದರು. ಹಳೇಕೋಟೆ ಜುಮ್ಮಾ ಮಸ್ಜಿದ್ ಖತೀಬರಾದ ಉಸ್ಮಾನ್ ಸ-ಅದಿ ಅಲ್ ಫಳಿಲ್ ಹಾಗೂ ಸದರ್ಚ ಮುಹಲ್ಲಂ ಯು.ಟಿ.ಎಮ್. ಇರ್ಫಾನ್ ಮದನಿ ದುವಾ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಹಳೆಕೋಟೆ ಜುಮ್ಮಾ ಮಸ್ಜಿದ್ ನ ಅಧ್ಯಕ್ಷ ಮುಹಮ್ಮದ್ ರಪೀಕ್ ಎಚ್., ಅಬ್ದುಲ್ ರವೂಫ್ ಮೊದಲಾದವರು ಉಪಸ್ಥಿತರಿದ್ದರು.


