UN NETWORKS
ಮಂಗಳೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು ದಕ್ಷಿಣ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಮಧುಸೂದನ್ ಕುಶೆ ವಿದ್ಯಾಸಂಸ್ಥೆ ಅತ್ತಾವರ ಇಲ್ಲಿ ಮಂಗಳೂರು ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರವು ನಡೆಯಿತು.
ಇದನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಜೀವನ್ದಾಸ್ ಶೆಟ್ಟಿ ಬಜ್ಪೆ ಇವರು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಮತ್ತು ಅಟೋಟಗಳನ್ನು ಮಾತ್ರ ಕಲಿಸಿದರೆ ಸಾಲದು. ಮುಖ್ಯವಾಗಿ ಇಂದಿನ ಸಂದರ್ಭದಲ್ಲಿ ನೈತಿಕತೆ ಹೇಗೆ ರೂಢಿಸಿಕೊಳ್ಳಬೇಕು ಮತ್ತು ಮಾನವೀಯ ಮೌಲ್ಯಗಳನ್ನು ಹೇಗೆ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯಪಡಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕ ಶಿಕ್ಷಕರ ಪರಿವೀಕ್ಷಣಾಧಿಕಾರಿ ಗುರುನಾಥ ಬಾಗೇವಾಡಿಯವರು ವಹಿಸಿ, ಅಧ್ಯಾಪಕರು ಪ್ರತೀ ದಿನ ಪುನಃಶ್ಚೇತನಗೊಳ್ಳುತ್ತಿರಬೇಕು. ಇಂದಿನ ವಿವಿಧ ಸವಾಲುಗಳಿಗೆ ವಿದ್ಯಾರ್ಥಿಗಳು ಯಾವ ರೀತಿ ತಯಾರಾಗಬೇಕು ಎಂಬುದಕ್ಕೆ ಅಧ್ಯಾಪಕರು ಹೆಚ್ಚಿನ ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿತುಕೊಳ್ಳುವುದು ಬಹಳ ಮುಖ್ಯವೆಂದರು. ಮುಖ್ಯ ಅತಿಥಿಯಾಗಿ ಮಧುಸೂದನ್ ಕುಶೆಯ ಪ್ರಾಂಶುಪಾಲರಾದ ಕೆ.ಕೆ. ಉಪಾಧ್ಯಾಯ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಲಿಲ್ಲಿ ಪಾಯಸ್, ಪ್ರಧಾನ ಕಾರ್ಯದರ್ಶಿ ರಾಜೀವ್ ನಾಯಕ್, ಕೋಶಾಧಿಕಾರಿ ಲ್ಯಾನ್ಸಿ ಸಿಕ್ವೇರಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜೀವನ್ದಾಸ್ ಶೆಟ್ಟಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ತ್ಯಾಗಂ ಹರೇಕಳ ಇವರು ಪ್ರಸ್ತಾವನೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಕಾರ್ಯಾಗಾರವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಅರುಣ್ ಪ್ರಸಾದ್ ರೈಯವರು ನೆರವೇರಿಸಿಕೊಟ್ಟರು. ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ವಂದಿಸಿದರು. ವಿಷ್ಣು ಹೆಬ್ಬಾರ್ರವರು ಕಾರ್ಯಕ್ರಮ ನಿರೂಪಿಸಿದರು.


