UN NETWORKS
ಮಂಗಳೂರು: ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ಬ್ಯಾನರ್ ನಲ್ಲಿ ಕೋಟಿ ಚೆನ್ನಯರ ಫೋಟೋ ಹಾಕಿ ಯಾವುದೇ ಅವಮಾನ ಮಾಡಿಲ್ಲ, ತುಳುನಾಡಿನ ವೀರ ಯೋಧರ ಹುಟ್ಟೂರಿನಲ್ಲಿ ಅವರಿಗೆ ಗೌರವ ಸಲ್ಲಿಸಲಾಗಿದೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.
ಪುತ್ತೂರಿನಲ್ಲಿ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ಕೋಟಿ ಚೆನ್ನಯರ ಫೋಟೋ ಹಾಕಿರುವುದಕ್ಕೆ ಉಸ್ತುವಾರಿ ಸಚಿವ ರಮಾನಾಥ ರೈ ಅವರು ವಿರೋಧ ವ್ಯಕ್ತಪಡಿಸಿದ್ದರು ಮತ್ತು ವೀರ ಯೋಧರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಈ ಬಗ್ಗೆ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹರಿಕೃಷ್ಣ ಬಂಟ್ವಾಳ, ಬಿಲ್ಲವ ಮುಖಂಡ ಜರ್ನಾದನ ಪೂಜಾರಿ ಅವರನ್ನು ಸಾರ್ವಜನಿಕವಾಗಿ ಅವಮಾನ ಮಾಡಿರುವ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಇದನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬಂಟ್ವಾಳಕ್ಕೆ ಭೇಟಿ ನೀಡಿದ್ದ ವೇಳೆ ಹಲವಾರು ಫ್ಲೆಕ್ಸ್ ಗಳಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಹಾಕಲಾಗಿತ್ತು. ಇದನ್ನು ರಮಾನಾಥ ರೈ ಅವರು ಮರೆತ್ತಿದ್ದಾರೆ. ಅವರಿಗೆ ಕಣ್ಣು ಕಾಣಿಸದೆ ಇದ್ದರೆ ನಾವು ಬಿಜೆಪಿಯ ಕನ್ನಡಕ ನೀಡುತ್ತೇವೆ ಎಂದು ವ್ಯಂಗ್ಯವಾಡಿದರು.

ಬಿಲ್ಲವ ಸಮಾಜದ ಬಗ್ಗೆ ಮಾತನಾಡುವಂತಹ ನೈತಿಕತೆ ರಮಾನಾಥ ರೈ ಅವರಿಗಿಲ್ಲ. ದೇಯಿ ಬೈದೆತಿ ಅವರ ಬಗ್ಗೆ ಮುಸ್ಲಿಮನೊಬ್ಬ ಅವಹೇಳನ ಮಾಡಿದಾಗ ರಮಾನಾಥ ರೈ ಅವರು ಅದನ್ನು ಖಂಡಿಸಲು ಹೋಗಿಲ್ಲ. ಇದು ಬಿಲ್ಲವರಿಗೆ ಆದ ಅವಮಾನವೆಂದು ಅವರು ಭಾವಿಸಲಿಲ್ಲ. ರಮಾನಾಥ ರೈ ಅವರಿಗೆ ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿದೆ. ಜನರು ಒಟ್ಟಾಗಿ ಬಾಳುವುದು ಅವರಿಗೆ ಬೇಕಿಲ್ಲ. ಯಾವಾಗಲೂ ಜಾತಿ, ಧರ್ಮಗಳ ಮಧ್ಯೆ ಕಂದಕ ನಿರ್ಮಾಣ ಮಾಡಿ, ಕಳೆಮಟ್ಟದ ರಾಜಕೀಯ ಮಾಡುತ್ತಿರುತ್ತಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ, ಸಂಜಯ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.


