UN NETWORKS
ಮಂಗಳೂರು: ನಿನ್ನೆ ಕಾಟಿಪಳ್ಳದಲ್ಲಿ ನಡೆದ ಯುವಕ ದೀಪಕ್ ರಾವ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸುರತ್ಕಲ್, ಕಾಟಿಪಳ್ಳದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಬಂದ್ ವಾತಾವರಣ ನೆಲೆಸಿದೆ.
ಸಂಘ ಪರಿವಾರವು ಬಂದ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪರಿಸರದಲ್ಲಿ ಎಲ್ಲಾ ಅಂಗಡಿಮುಂಗಟ್ಟುಗಳು ಮುಚ್ಚಿವೆ. ವಾಹನ ಸಂಚಾರ ಸಾಕಷ್ಟು ವಿರಳವಾಗಿದೆ.ಈ ನಡುವೆ ದೀಪಕ್ ಮೃತದೇಹವನ್ನು ಪೊಲೀಸರು ಕಾಟಿಪಳ್ಳದ ಅವರ ಮನೆಗೆ ಸಾಗಿಸಿದ್ದಾರೆ. ಆದರೆ ಮೃತದೇಹವನ್ನು ಆ್ಯಂಬುಲೆನ್ಸ್ನಿಂದ ಇಳಿಸಲು ದೀಪಕ್ ಮನೆಯೆದುರು ಜಮಾಯಿಸಿರುವ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಪೋಷಕರು ಅವಕಾಶ ನೀಡುತ್ತಿಲ್ಲ. ಘಟನಾ ಸ್ಥಳಕ್ಕೆ ರಾಜ್ಯ ಗೃಹ ಸಚಿವರು ಭೇಟಿ ನೀಡುವಂತೆ ಸ್ಥಳದಲ್ಲಿ ಜಮಾಯಿಸಿರುವ ಜನರು ಒತ್ತಾಯಿಸುತ್ತಿದ್ದಾರೆ. ಇದರಿಂದ ಸದ್ಯ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದೆ.
ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸುರತ್ಕಲ್, ಕಾಟಿಪಳ್ಳದಲ್ಲಿ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.


