UN NETWORKS
ಉಳ್ಳಾಲ: ಪಕ್ಷದ ಧ್ವನಿ ಮತ್ತು ಕಣ್ಣಾಗಿರುವ ಕಾರ್ಯಕರ್ತರು ಒಗ್ಗಟ್ಟಿನಿಂದ ಹೋಗುವ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ರಾಜ್ಯ ವ್ಯಾಪಿಯಲ್ಲಿ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಮುಡಿಪು ಮತ್ತು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಡಿಪು ಆಡಿಟೋರಿಯಂನಲ್ಲಿ ಗುರುವಾರ ಜರಗಿದ ಬೂತ್ ಮಟ್ಟದ ಪ್ರತಿನಿಧಿ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕೀಯ ಎಂದಿಗೂ ಗಣಿತವಾಗಲು ಸಾಧ್ಯವಿಲ್ಲ, ಅದು ರಸಾಯನಶಾಸ್ತ್ರವಿದ್ದಂತೆ, ಕೂಡಿಸಿ ಕಳೆಯುವಂತಹ ಪ್ರಮೇಯ ರಾಜಕೀಯದಲ್ಲಿಲ್ಲ. ಕೇವಲ ಸೂತ್ರಗಳು ಮಾತ್ರ ರಾಜಕೀಯ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು. ಕಾರ್ಯಕರ್ತರು ವಿರೋಧ ಪಕ್ಷದವರ ಎದುರಲ್ಲಿ ಧರ್ಯವಾಗಿ ಮಾತನಾಡಲು ಆತ್ಮವಿಶ್ವಾಸ ಮತ್ತು ಸ್ವಾಭಿಮಾನದಿಂದ ರಾಜ್ಯಾದ್ಯಂತ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಚಯಿಸುವ ಪ್ರಯತ್ನ ಕಾರ್ಯಾಗಾರದಿಂದ ಆಗಲಿದೆ. ಚುನಾವಣೆ ಪೂರ್ವ ಇಟ್ಟಂತಹ ಆಶ್ವಾಸನೆಗಳನ್ನು ಬಹುತೇಕ ಈಡೇರಿಸಲಾಗಿದೆ. ಎಲ್ಲಿಯಾದರೂ ಬಿಟ್ಟುಹೋಗಿದ್ದಲ್ಲಿ ಕಾರ್ಯಕರ್ತರು ಗಮನಕ್ಕೆ ತಂದಲ್ಲಿ , ಅದನ್ನು ನಿರ್ವಹಿಸುವ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಕೆಪಿಸಿಸಿ ಸದಸ್ಯ ವೆಂಕಪ್ಪ ಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭರತ್ ಮುಂಡೋಡಿ, ಪುತ್ತೂರು ಬ್ಲಾಕ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಭಾಗವಹಿಸಿದ್ದರು. ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ, ಮುಡಿಪು ಬ್ಲಾಕ್ ವೀಕ್ಷಕರಾದ ಡಿಸಿಸಿ ಪ್ರಧಾನ ಕಾರ್ಯದರ್ಶಿ ಹಿಲ್ಡಾ ಆಳ್ವ, ಡಿಸಿಸಿ ಕಾರ್ಯದರ್ಶಿಗಳಾದ ಮೋಹನ್ ಸಾಲಿಯಾನ್ ಹಾಗೂ ಕಾರ್ಮಿಕ ಘಟಕದ ಅಧ್ಯಕ್ಷ ನಾಸಿರ್ ನಡುಪದವು, ತಾ.ಪಂ ಸದಸ್ಯ ಹೈದರ್ ಕೈರಂಗಳ ಉಪಸ್ಥಿತರಿದ್ದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಸ್ವಾಗತಿಸಿದರು. ಜಲೀಲ್ ಮೋಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು.











