UN NETWORKS
ಕೊಣಾಜೆ:ಮೌಢ್ಯ ನಿಷೇಧ ಕಾಯಿದೆ ಜಾರಿಗೆ ತರುವ ಮೊದಲು ಅಂಧಾನುಕರಣೆಯನ್ನು ತಡೆಯುವ ಪ್ರಯತ್ನ ಆಗಬೇಕು. ಆಯಾ ಪ್ರದೇಶಕ್ಕೆ ಹೊಂದಿಕೆಯಾಗುವ ಉಡುಪು, ಆಹಾರ, ಸಂಸ್ಕೃತಿಯ ಪಾಲನೆ ಅತ್ಯಗತ್ಯ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸವಾರಿಯಲ್ಲಿರುವ ಶ್ರೀಗಳು ಬುಧವಾರ ಕೋಳ್ಯೂರು ವಲಯದ ಕೊಣಾಜೆ ಶಂಕರ ಭಟ್ ಅವರ ಮನೆಯಲ್ಲಿ ಭಿಕ್ಷಾಸೇವೆ ಸ್ವೀಕರಿಸಿದ ಬಳಿಕ ಆಶೀರ್ವಚನ ನೀಡಿದರು.
ಪ್ರಾಚೀನ ಕಾಲದ ಉಡುಗೆ ತೊಡುಗೆ, ಶೈಲಿಯನ್ನು ಗಮನಿಸಿದರೆ ಮಹಿಳೆಯರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪುರುಷರು ಸಾಂಸ್ಕøತಿಕ ಉಡುಪು ಧರಿಸುವುದರಿಂದ ವಿಮುಖರಾಗಿದ್ದಾರೆ. ಶಿಖೆ, ತಿಲಕ, ಪಂಚೆ ಇತ್ಯಾದಿಗಳನ್ನು ಧರಿಸುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಮಠ ಮಂದಿರಗಳಿಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳಲ್ಲಾದರೂ ಉಡುಗೆಯ ಶಿಷ್ಟಾಚಾರ ಉಳಿದುಕೊಂಡಿರುವುದು ಸಮಾಧಾನಕರ ಅಂಶ ಎಂದ ಅವರು, ಸಂಸ್ಕøತಿ ಉಳಿಸುವುದು, ಜಾಗೃತಿ ಮೂಡಿಸುವುದೇ ಗುರುಭಿಕ್ಷೆಯಂತಹ ಆಚರಣೆಗಳ ಉದ್ದೇಶ ಎಂದು ವಿವರಿಸಿದರು.
ಅತ್ಯಂತ ನಿಖರವಾದ ವೈಜ್ಞಾನಿಕ ಹಿನ್ನೆಗಳನ್ನೊಳಗೊಂಡ ಭಾರತೀಯ ಸಂಸ್ಕೃತಿಯ ಎಲ್ಲಾ ಆಚರಣೆಗಳಿಗೆ ಸಕಾರಾಣಾತ್ಮಕವಾದ ವಿವರಣೆಗಳಿವೆ. ಇಂತಹ ಆಚರಣೆಗಳನ್ನು ಮೌಢ್ಯ ಎಂದು ಕರೆಯುವುದು ಸರಿಯಲ್ಲ ಎಂದ ಅವರು, ನಮ್ಮ ದೇಶಕ್ಕೆ ಒಗ್ಗದ ಅಸಹಜ ಉಡುಪು ತೊಡುವುದು, ಅಪ್ರಸ್ತುತ ಆಹಾರ ಸೇವಿಸುವುದೇ ಅವೈಜ್ಞಾನಿಕ ಎಂದು ಪ್ರತಿಪಾದಿಸಿದರು.
ಕೊಣಾಜೆ ಶಂಕರ ಭಟ್ ಮನೆಯವರು ಹಾಗೂ ಎಡಕ್ಕೂಡ್ಲು ಮಹಾಬಲ ಭಟ್ ಭಿಕ್ಷಾ ಸೇವೆ ನೆರವೇರಿಸಿದರು. ಮಂಗಳೂರು ಹವ್ಯಕ ಮಂಡಲದ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ಟ, ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್ಟ, ಮುಡಿಪು ಹವ್ಯಕ ವಲಯಾಧ್ಯಕ್ಷ ಪೆರಡೆ ತಿರುಮಲೇಶ್ವರ ಭಟ್ಟ, ನಂತೂರಿನ ಶ್ರೀ ಭಾರತೀ ಕಾಲೇಜಿನ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ ಮತ್ತಿತರರು ಹಾಜರಿದ್ದರು. ಸ್ವಾಮೀಜಿ ಮೊಕ್ಕಾಂ ಸಂದರ್ಭ ಮಂಗಳೂರು ವಿ.ವಿ.ಕುಲಪತಿ ಪ್ರೊ.ಕೆ.ಬೈರಪ್ಪ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮೊದಲಾದವರು ಸ್ವಾಮೀಜಿಯನ್ನು ಭೇಟಿ ಮಾಡಿದರು.
ಇದಕ್ಕೂ ಮೊದಲು ಮಂಗಳವಾರ, ಮುಡಿಪು ಸಮೀಪದ ಮೂಲೂರು ಶ್ರೀ ಪರಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸ್ವಾಮೀಜಿ ರಾತ್ರಿ ಶಂಕರ ಭಟ್ ಮನೆಯಲ್ಲಿ ಮೊಕ್ಕಾಂ ಹೂಡಿದರು. ಭಿಕ್ಷಾ ಸೇವೆ ಸಂದರ್ಭ ಅಭಯಾಕ್ಷರ ಅಭಿಯಾನ ನೆರವೇರಿತು. ವಿದ್ಯಾರ್ಥಿ ವಾಹಿನಿ ವತಿಯಿಂದ ಮಂಗಳೂರು ಮಂಡಲ ವ್ಯಾಪ್ತಿಯ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಗೋಸಂಜೀವಿನಿ ಸೇವೆಗೆ ದೇಣಿಗೆ ಸಂಗ್ರಹಿಸಲಾಯಿತು.


