UN NETWORKS
ತೊಕ್ಕೊಟ್ಟು : ಭಗತ್ ಸಿಂಗ್ ಸೇವಾ ಪ್ರತಿಷ್ಠಾನವೂ ಎಲ್ಲರಲ್ಲೂ ಸಮಾನತೆಯನ್ನು ತರುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಕ್ಷೇಮವನ್ನು ತರುವ ಪ್ರಯತ್ನ ಮಾಡಬೇಕಿದೆ ಎಂದು ಕೋಟೆಕಾರು ಶೃಂಗೇರಿ ಶಾಖಾ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಹೇಳಿದ್ದಾರೆ.
ಅವರು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ದಶಮ ಸಂಭ್ರಮದ ಪ್ರಯುಕ್ತ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ದಶಮ ಸಂಭ್ರಮಾಚರಣೆ, ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಹುತಾತ್ಮರಾದ ಭಗತ್‍ಸಿಂಗ್ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ನಿರಂತರವಾಗಿ ಹತ್ತು ವರ್ಷಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ಪ್ರತಿಷ್ಠಾನದ ಕಾರ್ಯ ಎಲ್ಲರಿಗೂ ಮಾದರಿ.ಪ್ರಸ್ತುತ ಸಮಾಜದಲ್ಲಿ ಯಾವುದು ಧರ್ಮವಲ್ಲ, ಅದನ್ನು ಆಚರಿಸಲಾಗುತ್ತಿದೆ. ಸಮಾನತೆ ಇಲ್ಲವೆಂದಾದಲ್ಲಿ ಅಂತಹ ವ್ಯವಸ್ಥೆಯಿಂದ ಹೊರಬರುವ ಮನಸ್ಥಿತಿ ಬೆಳೆಯಬೇಕಿದೆ. ಸಮಾಜದ ಮುಖಂಡರು ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕಿದೆ ಎಂದರು.
ಈ ಸಂದರ್ಭ ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚ್ ನ ಧರ್ಮಗುರು ಫಾ.ಜೆ.ಬಿ ಸಲ್ದಾನ್ಹ, ಇಂದಿನ ಯುವಪೀಳಿಗೆಗೆ ದೀಪಾವಳಿ ಆಚರಣೆಯ ಮಹತ್ವದ ಅರಿವಿಲ್ಲ. ಕತ್ತಲೆಯಲ್ಲಿದ್ದ ಊರಿಗೆ ಬೆಳಕು ಹಾಗೂ ಸಿರಿಸಂಪತ್ತು ದೇವರು ಕರುಣಿಸಲಿ ಅನ್ನುವ ಆಶಯದೊಂದಿಗೆ ದೀಪಗಳನ್ನಿಟ್ಟು ಆಚರಿಸುವ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಗವತಿ ಕ್ಷೇತ್ರ ಉಳ್ಳಾಲ ಇದರ ಆಡಳಿತ ಮೊಕ್ತೇಸರ ಗಂಗಾಧರ್ ಉಳ್ಳಾಲ್ ವಹಿಸಿದ್ದರು.
ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಹಾಗೂ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ.ಸುವರ್ಣ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮಂಗಳೂರು ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಭಗವತಿ ತೀಯ ಸಮಾಜದ ಉಪಾಧ್ಯಕ್ಷ ಸುರೇಶ್ ಭಟ್ನಗರ, ದಕ್ಷಿಣ ವಲಯ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ್ ಅಡ್ಯಂತಾಯ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಮುನೀರ್ ಬಾವಾ, ಉದ್ಯಮಿಗಳಾದ ಹರೀಶ್ ಕಾಮತ್ ಯೋಗೀಶ್ ಕುಮಾರ್ ಮತ್ತು ಸುಕುಮಾರ್ ಉಳ್ಳಾಲಬೈಲ್ ಮುಖ್ಯ ಅತಿಥಿಗಳಾಗಿದ್ದರು.
ಪ್ರತಿಷ್ಠಾನದ ಗೌರವ ಸಲಹೆಗಾರ ಆನಂದ ಅಸೈಗೋಳಿ ಸ್ಪರ್ಧೆಗಳಲ್ಲಿ ವಿಜೇತರ ವಿವರ ನೀಡಿದರು. ಈ ಸಂದರ್ಭದಲ್ಲಿ ತೊಕ್ಕೊಟ್ಟು ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಮುಖ್ಯಶಿಕ್ಷಕ ರಾಜೀವ ಮೆಂಡನ್, ತೊಕ್ಕೊಟ್ಟು ಶ್ರೀ ವಿಠೋಭ ರುಕ್ಮಯಿ ದೇವಸ್ಥಾನ ಹಾಗೂ ಶ್ರೀ ನಿತ್ಯಾನಂದ ಯುವಕ ಮಂಡಲದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಕೃಷ್ಣ ಪೊನ್ನತ್ತೋಡು ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕಾಪಿಕಾಡ್ ವಂದಿಸಿದರು.




































