UN NETWORKS
ಹರೇಕಳ: ಯಡಿಯೂರಪ್ಪ ಬಗ್ಗೆ ಮಾತನಾಡಿದರೆ ಉರಿದುಬೀಳುತ್ತಿದ್ದ ಶೋಭಾ ಕೆರಂದ್ಲಾಜೆಯವರು, ಇದೀಗ ಮೋದಿ ಬಗ್ಗೆ ಮಾತನಾಡಿದಾಗ ಉರಿದುಬೀಳಲು ಏನು ಕಾರಣ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಹೇಳಿದ್ದಾರೆ.
ಹರೇಕಳ ಪಂಚಾಯತ್ ವ್ಯಾಪ್ತಿಯ 59ನೇ ವಾರ್ಡಿನ ಕಿಸಾನ್ ನಗರದಲ್ಲಿ ಗುರುವಾರ ಹಮ್ಮಿಕೊಂಡ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಂಟ್ವಾಳ ಮತ್ತು ಉಳ್ಳಾಲ ಕ್ಷೇತ್ರದ ಸಚಿವರು ಎಷ್ಟು ಒಳ್ಳೆಯವರು ಅನ್ನುವುದು ಬೂತ್ ಮಟ್ಟದ ಕಾರ್ಯಕರ್ತರ ಬೆಂಬಲದಿಂದ ಗೊತ್ತಾಗುತ್ತಿದೆ.
ಬಿಜೆಪಿಯವರ ದುರಾಡಳಿತ ಮತ್ತು ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸಿದ ವಿವರ ಹಾಗೂ ಯೋಜನೆಗಳ ಮಾಹಿತಿಯನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದ ಅವರು ಪ್ರಚಾರದ ವೇಳೆ ಹಿಂದಿನಿಂದ ದೇಶವನ್ನಾಳಿದ ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಗಳ ನಡವಳಿಕೆ ಮತ್ತು ಮುಖ್ಯಮಂತ್ರಿಗಳ ಸರಳ ವ್ಯಕ್ತಿತ್ವದ ಉಲ್ಲೇಖವನ್ನು ಒಳಗೊಂಡಂತಹ ಪುಸ್ತಕವನ್ನು ಮನೆಗಳಿಗೆ ನೀಡುತ್ತಿದ್ದೇವೆ.
ಕರ್ನಾಟಕ ಇತಿಹಾಸದಲ್ಲೇ ಪ್ರಥಮ ಬಾರಿ ಬಿಜೆಪಿ ಮುಖ್ಯಮಂತ್ರಿ ಹಾಗೂ ಸಚಿವರುಗಳು ಜೈಲು ಪಾಲಾಗಿದ್ದಾರೆ. ಅಂತಹ ಜೈಲಿಗೆ ಹೋದವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲು ಮೋದಿ ಮತ್ತು ಅಮಿತ್ ಷಾ ಬೆಂಬಲಿಸಲು ಕಾರಣ ಏನು ಎಂಬುದು ತಿಳಿದುಬರುತ್ತಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಮೊದಲಿಗೆ ಯಡಿಯೂರಪ್ಪ ಲೂಟ್ ಕಿ ಬಾತ್ ಬಗ್ಗೆ ತಿಳಿಸಲಿ. ಕಾಂಗ್ರೆಸ್ ಪಕ್ಷದ ಪ್ರಧಾನಿಯವರು ನಡೆಸಿದ ಕಾಮಗಾರಿ ಅರ್ಧವಿದ್ದುದನ್ನು ಪೂರ್ಣಗೊಳಿಸಿ ತಮ್ಮ ಕಾಮಗಾರಿ ಎಂದು ಕೇಂದ್ರ ಸರಕಾರ ಹೇಳುತ್ತಾ ಬಂದಿರುವುದು ವಿಪರ್ಯಾಸ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮುಸ್ತಾಫ ಹರೇಕಳ ಮಾತನಾಡಿ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯ ಶೇ.90 ಅಂಶವನ್ನು ಈಡೇರಿಸಿದೆ. ಭರವಸೆಯಂತೆ ಕೊಟ್ಟ ಕಾರ್ಯಕ್ರಮದ ವಿವರಗಳ ಮಾಹಿತಿಯನ್ನು ಪುಸ್ತಕದ ಮೂಲಕ ನೀಡಿದ್ದೇವೆ. ಬಿಜೆಪಿಯವರ ನಕಲಿ ಪ್ರಚಾರದ ಕುರಿತ ವಿವರವನ್ನು ಭೇಟಿ ಮುಖೇನ ಜನರಲ್ಲಿ ಅರಿವು ಮೂಡಿಸುವುದಾಗಿ ತಿಳಿಸಿದರು.
ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮುಸ್ತಾಫ ಹರೇಕಳ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಕೊಣಾಜೆ, ತಾ.ಪಂ ಸದಸ್ಯರಾದ ಸುರೇಖಾ ಚಂದ್ರಹಾಸ್ , ಕ್ಲೇರಾ ಕುವೆಲ್ಲ, ಶಶಿಪ್ರಭಾ ಶೆಟ್ಟಿ, ಪದ್ಮಾವತಿ ಪೂಜಾರಿ, ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಡಿಸೋಜಾ, ಉಪಾಧ್ಯಕ್ಷ ಮಹಾಬಲ ಹೆಗ್ಡೆ,ಉಳ್ಳಾಲ ನಗರಸಭೆ ಸದಸ್ಯೆ ರಝಿಯಾ ಇಬ್ರಾಹಿಂ ಝಕರಿಯಾ ಮಲಾರ್, ಇಕ್ಬಾಲ್ ಸಾಮಣಿಗೆ, ಹಮೀದ್ ಕಿನ್ಯಾ, ಹರೇಕಳ ಪಂ. ಸದಸ್ಯರುಗಳಾದ ಬದ್ರುದ್ದೀನ್, ಬಶೀರ್, ಎಂ.ಪಿ.ಮಜೀದ್, ಹಾಗೂ ಕಿಸಾನ್ನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧೀಕ್, ಸಲೀಂ ಅಸೈಗೋಳಿ ಉಪಸ್ಥಿತರಿದ್ದರು.



