UN NETWORKS
ಕೊಣಾಜೆ: ಯಕ್ಷಗಾನ ಎಷ್ಟು ಶ್ರೀಮಂತ ಕಲೆಯೋ ಆ ರಂಗದಲ್ಲಿ ಅಷ್ಟೇ ಬಡತನ ಅನುಭವಿಸುವ ಕಲಾವಿದರು ಇದ್ದಾರೆ. ಅಂತಹ ಕಲಾವಿದರ ನೆರವಿಗೆ ಪಟ್ಲ ಫೌಂಡೇಶನ್ ಯಕ್ಷಗಾನ ಕಲಾಭಿಮಾನಿಗಳ ಸಹಕಾರದಿಂದ ಸ್ವಲ್ಪ ಮಟ್ಟಿಗೆ ಸಹಾಯ ಮಾಡಲು ಸಾಧ್ಯವಾಗಿದೆ ಎಂದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿವಿಯ ಮಂಗಳ ಸಭಾಂಗಣದಲ್ಲಿ ಬುಧವಾರ ನಡೆದ ಯಕ್ಷ ಕವಿ ಕಾವ್ಯ ಯಾನ, ಉಪನ್ಯಾಸ ಮಾಲಿಕೆ 2017-18 ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಲ ಫೌಂಡೇಶನ್ ಮೂಲಕ ಇದುವರೆಗೆ 1ಕೋಟಿ 20ಲಕ್ಷ ರೂ. ಕ್ರೋಢೀಕರಿಸಲು ಸಾಧ್ಯವಾಗಿದ್ದು ಆ ಹಣದಿಂದ ಕಲಾವಿದರನ್ನು ಗೌರವಿಸುವ ಹಾಗೂ ಅಶಕ್ತ ಕಲಾವಿದರನ್ನು ಸಹಕರಿಸಲು ಸಾಧ್ಯವಾಗಿರುವುದು ಎಲ್ಲದ್ದಕ್ಕೂ ಯಕ್ಷಗಾನದಿಂದ ಸಾಧ್ಯವಾಗಿದೆ. ಪಾರಂಪರಿಕ ಕಲೆ ಯಾವತ್ತೂ ಅಳಿಯಬಾರದು. ಆ ನಿಟ್ಟಿನಲ್ಲಿ 15 ವರ್ಷಗಳ ಹಿಂದೆ ನಿಲ್ಲುವ ಹಂತಕ್ಕೆ ತಲುಪಿದ್ದ ಯಕ್ಷಗಾನ ಕಲೆ ಇಂದು ವಿಜೃಂಭಿಸುತ್ತಿರುವುದು ಕಲೆಗೆ ಅಳಿಗಾಲವಿಲ್ಲ ಎಂಬುದಕ್ಕೆ ಸಾಕ್ಷಿ ಎಂದ ಅವರು ಖ್ಯಾತ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಅಭಿನವ ವಾಲ್ಮೀಕಿ ಎಂದೇ ಖ್ಯಾತರು. ಅವರು ಬರೆದ ಮೂವತ್ತು ಪ್ರಸಂಗಗಳನ್ನು ಬಿಡುಗಡೆಗೊಳಿಸಲು ಆರ್ಥಿಕ ಅಡಚಣೆ ಎದುರಾದಾಗ ಸರಕಾರ ಸಂಘ ಸಂಸ್ಥೆಗಳು ಯಾರೂ ಪ್ರಕಟಣೆಗೆ ಮುಂದಾಗಲಿಲ್ಲ. ನನ್ನ ಗುರುಗಳಾಗಿದ್ದ ಅವರ ಕಲಾಪ್ರೇಮ ಪ್ರೌಢಿಮೆ ಅರಿತುಕೊಂಡು ಪಟ್ಲ ಫೌಂಡೇಶನ್ ಬಹಳ ಪ್ರೀತಿಯಿಂದ ಆ ಕಾರ್ಯ ಮಾಡಿದ್ದೇವೆ. 30 ಪ್ರಸಂಗ ಬರೆದ ಬಹಳ ಶ್ರೇಷ್ಠರೂ ಆಗಿರುವ ಅವರಂತಹವರನ್ನು ಕುಲಪತಿಗಳು ತಮಗೆ ಇರುವ ಎಲ್ಲ ಅವಕಾಶ ಬಳಸಿಕೊಂಡು ಗೌರವ ಡಾಕ್ಟರೇಟ್ ಕೊಡುವುದಕ್ಕೆ ಮುಂದಾಗಬೇಕು.
ವಿಶೇಷ ಉಪನ್ಯಾಸ ನೀಡಿದ ಜಾನಪದ ವಿದ್ವಾಂಸ ಮಂಗಳೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೋ. ಕೆ. ಚಿನ್ನಪ್ಪ ಗೌಡ ಮಾತನಾಡಿ ನೂರು ವರ್ಷಗಳ ಹಿಂದೆ ಯಕ್ಷಗಾನ ಕಲೆ ಪ್ರದರ್ಶನಕ್ಕೆ ಊರಿನ ಶ್ರೀಮಂತ ವ್ಯಕ್ತಿಯ ಮನೆಯ ಮುಂದೆ ಅವಕಾಶಕ್ಕಾಗಿ ಕಲಾವಿದರು ಕಾಯುತ್ತಿದ್ದರು. ಶ್ರೀಮಂತರ ಸಹಕಾರವಿಲ್ಲದೆ ಯಕ್ಷಗಾನ ಪ್ರದರ್ಶನ ಕಾಣುತ್ತಿರಲಿಲ್ಲ. ಅವಕಾಶ ಸಿಕ್ಕರೆ ಸಾಕು ಎಂದವರಿಗೆ ಪ್ರದರ್ಶನ ಸಮಯದಲ್ಲಿ ರಾತ್ರಿಯಿಂದ ಬೆಳಗಿನ ತನಕ ಭಾಗವತರು ಚೆಂಡೆ ಮದ್ದಲೆ ಕಲಾವಿದರು ಸೇವೆ ಸಲ್ಲಿಸಬೇಕಿತ್ತು. ಆದರೂ ಮೇಳಕ್ಕೆ ಸಂಭಾವನೆ ರೂಪದಲ್ಲಿ ಕೇವಲ ಎಂಟು ರೂ. ಸಂದಾಯವಾಗುತ್ತಿತ್ತು. ಅದರಲ್ಲೂ ಕಲಾವಿದನಿಗೆ ಎಂಟಾಣೆ ಸಿಗುತ್ತಿತ್ತು. ಕಲಾವಿದನಿಂದ ತಪ್ಪಾದರೆ ಜುಲ್ಮಾನೆ ವಿಧಿಸಲಾಗುತ್ತಿತ್ತು ಎಂದು ಕೋಟೆಕಾರು ದೇರಣ್ಣ ಬದುಕಿನ ಪುಸ್ತಕದಲ್ಲಿ ಅಡಕವಾದ ಮಾತುಗಳನ್ನು ನೆನಪಿಸಿದರು.
ಪ್ರಸ್ತುತ ಕಾಲಘಕಾಲಘಟ್ಟ ಯಕ್ಷಗಾನಕ್ಕೆ ಉತ್ತುಂಗ ಕಾಲ. ವ್ಯವಹಾರಿಕವಾಗಿಯೂ ಉನ್ನತ ಹಂತದಲ್ಲಿದೆ. ಕವಿ ಬರೆದ ಪ್ರಸಂಗ ಕೃತಿ ಕವಿ ಕಾವ್ಯವಾಗಿ ಅದು ಭಾಗವತರ ಕೈ ಸೇರುತ್ತದೆ. ಭಾಗವತರ ಕೈ ಸೇರಿದ ಬಳಿಕ ನಿಗದಿತ ಅವ„, ಸೇರಿದ ಸಭೆ, ಕಲಾವಿದರು, ಸಮಯ ಸಂದರ್ಭ ಹೀಗೆ ಕೆಲವೊಂದು ಆಯಾಮಗಳಲ್ಲಿ ಸರಳತೆಯಿಂದ ಸಂಕೀರ್ಣದ ಕಡೆಗೆ ಹೋಗುತ್ತದೆ ಎಂದು ನುಡಿದರು.
ನಾಲ್ಕು ನೂರು ವರ್ಷಗಳಿಂದ ಬೆಳೆದುಕೊಂಡು ಬಂದ ಯಕ್ಷಗಾನಕ್ಕೆ ನಿರ್ದೇಶಕರು ಇಲ್ಲ ಎಂಬ ಮಾತಿದೆ. ಕೆಲವೊಮ್ಮೆ ಹವ್ಯಾಸಿ ಕಲಾವಿದರು ಪರಂಪರೆಯನ್ನು ಉಳಿಸಲು ವೃತ್ತಿ ಕಲಾವಿದರಿಗಿಂತ ಹೆಚ್ಚು ಪ್ರಯತ್ನ ಮಾಡುವುದನ್ನು ಗಮನಿಸಬಹುದು. ಹಾಗಾಗಿ ವೃತ್ತಿ ಕಲಾವಿದರು ಬಹಳಷ್ಟು ಜಾಗೃತರಾಗಿರಬೇಕು. ಹಾಗೆಯೇ ಪ್ರಸಂಗದ ಕುರಿತಾಗಿ ಕಲಾವಿದರು ಕುಳಿತು ಚರ್ಚಿಸುವ ಅವಕಾಶ ಇರಬೇಕು. ಪಟ್ಲರಿಗೆ ಪರಂಪರೆಯನ್ನು ಸೃಷ್ಟಿಸಲು ಸಾಧ್ಯವಿದ್ದು ಆ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ನುಡಿದರು.
ವಿವಿ ಕುಲಪತಿ ಪ್ರೋ. ಕೆ. ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ. ಚಿನ್ನಪ್ಪ ಗೌಡರನ್ನು ಸನ್ಮಾನಿಸಲಾಯಿತು.
ಶ್ರೀದೇವಿ ಕಲ್ಲಡ್ಕ ಪ್ರಾರ್ಥಿಸಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಶೋಧನಾ ಅಧಿಕಾರಿ ಡಾ. ರಾಜಶ್ರೀ ಕಾರ್ಯಕ್ರಮ ನಿರೂಪಿಸಿಸಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕ ಸತೀಶ್ ಕೊಣಾಜೆ ವಂದಿಸಿದರು.







