UN NETWORKS
ಉಳ್ಳಾಲ: ಶಾಂತಿ ಕದಡುವಂತಹ ಘಟನೆಗಳು ನಡೆಯುವ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಸಮಿತಿ ಎಲ್ಲಾ ಜಾತಿ ಧರ್ಮದವರನ್ನು ಕರೆದು ಈದ್ ಸ್ನೇಹ ಸಮ್ಮಿಲನ ಹಮ್ಮಿಕೊಳ್ಳುತ್ತಿರುವುದು ಉತ್ತಮ ಕಾರ್ಯ. ಇಂತಹ ಕಾರ್ಯಕ್ರಮವು ಸೌಹಾರ್ದತೆಯನ್ನು ಉಳಿಸಲು ಪೂರಕವಾಗಲಿದೆ ಎಂದು ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದ್ದಾರೆ.
ಉಳ್ಳಾಲ ಕೇಂದ್ರ ಜುಮಾ ಮಸೀದಿ ಹಾಗೂ ಸಯ್ಯದ್ ಮದನಿ ದರ್ಗಾ ಆಶ್ರಯದಲ್ಲಿ ಸೋಮವಾರ ದರ್ಗಾ ವಠಾರದಲ್ಲಿ ನಡೆದ ಈದ್ ಸ್ನೇಹ ಸಮ್ಮಿಲನ-2017 ಕಾರ್ಯಕ್ರಮದಲ್ಲಿ ಮಾತನಾಡಿದರು.ವಿವಿಧ ದರ್ಮಗಳು ಇರುವ ಈ ನೆಲದಲ್ಲಿ ವಿವಿಧ ಹಬ್ಬಗಳು ಆಚರಣೆಯಾಗುತ್ತವೆ. ಅವರವರ ವಿಶ್ವಾಸ, ನಂಬಿಕೆಯ ನೆಲೆಯಲ್ಲಿ ಆಚರಣೆಗಳು ನಡೆಯುತ್ತವೆ. ಇದನ್ನು ಅರ್ಥಮಾಡಿಕೊಳ್ಳಲು ಇಂತಹ ಸ್ನೇಹ ಕೂಟದಿಂದ ಮಾತ್ರ ಸಾಧ್ಯ ಎಂದರು.
ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಮಾತನಾಡಿ ದರ್ಗಾದಿಂದ ಕಳೆದ ಎರಡು ವರ್ಷಗಳಿಂದ ಉಳ್ಳಾಲದಲ್ಲಿ ಶಾಂತಿ, ಸೌಹಾರ್ದತೆ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ, ಇದು ನಿರಂತರ ನಡೆದರೆ ಭಗವಂತ ಪ್ರತಿಫಲ ನೀಡುವುದನ್ನು ಅಲ್ಲಗಳೆಯುವಂತಿಲ್ಲ . ಉಳ್ಳಾಲ ಅಭಿವೃದ್ಧಿ ಹೊಂದುವ ಪ್ರದೇಶವಾಗಿದ್ದರೂ ಸೂಕ್ಷ್ಮ ಪ್ರದೇಶ ಎನ್ನುವ ಹೆಸರು ಬಂದಿರುವುದರಿಂದ ಉದ್ಯಮ ಸ್ಥಾಪನೆಗಾಗಿ ಸರ್ಕಾರ ಜಮೀನು ಮೀಸಲಿಟ್ಟರೂ ಪ್ರಯೋಜನಕ್ಕೆ ಬಂದಿಲ್ಲ, ದರ್ಗಾ ಮುಖಾಂತರ ಶಾಂತಿ ಸ್ಥಾಪನೆಯಾಗಬೇಕಿದೆ, ವೇದಿಕೆಗಳಲ್ಲಿ ಭಾಷಣ ಮಾಡುವವರೂ ಪಾಲಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು.
ಸೂಕ್ಷ್ಮ ಪ್ರದೇಶ ಎನ್ನುವುದು ಉಳ್ಳಾಲಕ್ಕೆ ಶಾಪವಲ್ಲ, ಯಾರೂ ಭೂಮಿಗೆ ಬರುವಾಗ ಅರ್ಜಿ ಹಾಕಿ ಆಯಾ ಧರ್ಮದಲ್ಲಿ ಹುಟ್ಟುವುದಿಲ್ಲ. ಮತ್ಸರ, ದುಶ್ಚಟ, ದ್ವೇಷ ಎನ್ನುವ ರೋಗ ಮನಸ್ಸಿನಿಂದ ದೂರವಾಗಿ, ಹೆತ್ತವರು, ಹಿರಿಯರನ್ನು ಗೌರವಿಸಿದಾಗ ಸಮಾಜ ಶಾಂತಿಯುತವಾಗಿರುತ್ತದೆ ಎಂದು ಮುಖಂಡ ರವೀಂದ್ರರಾಜ್ ಉಳ್ಳಾಲ್ ತಿಳಿಸಿದರು.
ಪೆರ್ಮನ್ನೂರು ಚರ್ಚ್ ಧರ್ಮಗುರು ಫಾ. ಜೆ.ಪಿ. ಸಲ್ದಾನ ಮಾತನಾಡಿ, ಒಂದೇ ಜಾಗದಲ್ಲಿ ಹಲವು ಧರ್ಮಗಳು ಇರುತ್ತವೆ. ಪ್ರಸಕ್ತ ಇರುವ ಹಿಂದು, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ನಡುವೆ ವಿಚಾರಗಳಲ್ಲಿ ಸಮನ್ವಯತೆ ಇದೆ. ಆದರೆ ಪ್ರತಿಯೊಂದು ಕಾರ್ಯವು ಅವರ ವಿಶ್ವಾಸಕ್ಕೆ ತಕ್ಕ ನಡೆಯುತ್ತದೆ. ಮುಸ್ಲಿಮರು ಕರೆಯುವ ಪ್ರವಾದಿ ಇಬ್ರಾಹಿಂರವರನ್ನು ಕ್ರೈಸ್ತ ಧರ್ಮದಲ್ಲಿ ಅಬ್ರಾಹಂ ಎಂದು ಹೇಳಲಾಗುತ್ತದೆ. ಇದೇ ಪ್ರವಾದಿಯವರು ಹಜ್ ಸಮಯದಲ್ಲಿ ಬಲಿಯರ್ಪಿಸಿದ್ದ ಆಡಿನ ಮಾಂಸವನ್ನು ಬಡವರ, ಸ್ನೇಹಿತರ ಮತ್ತು ಕುಟುಂಬದವರಿಗೆ ಹಂಚಲಾಗಿದೆ ಎಂಬ ವಿಚಾರ ಗ್ರಂಥದಲ್ಲಿದೆ. ಇದಕ್ಕೆ ಕ್ರೈಸ್ತ ಧರ್ಮವು ಪ್ರೇರಣೆ ನೀಡುತ್ತದೆ. ಸಮುದಾಯ, ಕೂಟ ಒಂದೇ ಆದರೆ ಮಾತ್ರ ಶಾಂತಿ ಉಳಿಯಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಸಂಕೇತವಾಗಿದೆ, ಓರ್ವ ಮನುಷ್ಯನ ಬಲಿ ಪಡೆದು ದೇವನಿಗೆ ಏನೂ ಆಗೋದಿಲ್ಲ, ಆದರೆ ತನ್ನ ಆಜ್ಞೆ ಪಾಲಿಸುವ ಬಗ್ಗೆ ನಡೆದ ಪರೀಕ್ಷೆಯೇ ಹಬ್ಬದ ಆಚರಣೆಯಾಗಿದೆ. ಆದರೆ ಇಂದು ದೇವನ ಆಜ್ಞೆ ಪಾಲಿಸುವ ಬದಲು ತಪ್ಪಿ ನಡೆಯುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದರು.
ನಗರಸಭಾಧ್ಯಕ್ಷ ಹುಸೈನ್ ಕುಂಞಮೋನು, ಪೌರಾಯುಕ್ತೆ ವಾಣಿ ವಿ.ಆಳ್ವ, ನಿತ್ಯಾಧ್ಯರ್ ಚರ್ಚ್ನ ಧರ್ಮಗುರು ರೆ.ಫಾ.ಎಲಿಯಾಸ್ ಡಿಸೋಜ, ಉಳ್ಳಾಲ ಶ್ರೀ ವೀರಭದ್ರ ದೇವಸ್ಥಾನದ ಅಧ್ಯಕ್ಷ ಐತಪ್ಪ ಶೆಟ್ಟಿಗಾರ್, ನಗರಾಭಿವೃದ್ಧಿ ಮಂಡಳಿ ಸದಸ್ಯ ಮುರಳಿ ತೊಕ್ಕೊಟ್ಟು, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಕೌನ್ಸಿಲರ್ ಇಸ್ಮಾಯಿಲ್ ಪೊಡಿಮೋನು, ಬಾಜಿಲ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಪೂಜಾರಿ, ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಸಯ್ಯಿದ್ ಮದನಿ ಅರಬಿ ಟ್ರಸ್ಟ್ ಉಪಾಧ್ಯಕ್ಷ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಮೀರ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಕೋಶಾಧಿಕಾರಿ ಅಬ್ಬಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಇಬ್ರಾಹೀಮ್, ಜತೆ ಕಾರ್ಯದರ್ಶಿ ಎ.ಕೆ ಮೊಹಿಯದ್ದೀನ್, ಕೋಶಾಧಿಕಾರಿ ಹಮೀದ್ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.
ದರ್ಗಾ ಸಮಿತಿ ಸದಸ್ಯ ಫಾರೂಕ್ ಉಳ್ಳಾಲ್ ವಂದಿಸಿದರು. ಅಯೂಬ್ ಮಂಚಿಲ ಕಾರ್ಯಕ್ರಮ ನಿರೂಪಿಸಿದರು.
















