UN NETWORKS
ಕಿನ್ಯಾ: ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆಯೊಂದು ಸಂಪೂರ್ಣ ಕುಸಿದುಬಿದ್ದು, ಮನೆಮಂದಿ ಪವಾಡಸದೃಶವಾಗಿ ಪಾರಾದ ಘಟನೆ ಕಿನ್ಯ ಗ್ರಾಮಪಂಚಾಯಿತಿನ ಮಿನಾದಿ ಎಂಬಲ್ಲಿ ಮಂಗಳವಾರ ನಸುಕಿನ ಜಾವ ಸಂಭವಿಸಿದೆ
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಶ್ರೀನಿವಾಸ ಮತ್ತು ಭಾಗ್ಯಶ್ರೀ ದಂಪತಿಗೆ ಸೇರಿದ ಮನೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ದಂಪತಿ ಹಾಗೂ ಮಕ್ಕಳಾದ ಸುಶಾಂತ್, ನಿಶಾಂತ್, ಶುಭಶ್ರೀ ಪವಾಡಸದೃಶವಾಗಿ ಪಾರಾಗಿದ್ದಾರೆ. ಮನೆ ಕುಸಿಯಲು ಆರಂಭವಾಗುತ್ತಿದ್ದಂತೆ ಸದ್ದು ಕೇಳಿ ಎಲ್ಲರೂ ಹೊರಬಂದ ತಕ್ಷಣ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು, ಗೋಡೆಗಳಲ್ಲಿ ಬಿರುಕುಂಟಾಗಿದೆ. ಘಟನೆಯಿಂದ ರೂ.1 ಲಕ್ಷ ನಷ್ಟ ಸಂಭವಿಸಿದೆ.
ಅಶಕ್ತ ಕುಟುಂಬ : ಮೂರು ತಿಂಗಳ ಹಿಂದೆಯಷ್ಟೇ ಶ್ರೀನಿವಾಸ್ ಅವರ ತಾಯಿ ತೀರಿಕೊಂಡಿದ್ದರು. ಅಲ್ಲದೆ ಶ್ರೀನಿವಾಸ್ ಅವರು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, ಓರ್ವ ಪುತ್ರನೂ ಅಂಗವಿಕಲನಾಗಿದ್ದಾನೆ. ಇಬ್ಬರು ಎಳೆಯ ಹರೆಯದ ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಇಡೀ ಕುಟುಂಬದ ಜವಾಬ್ದಾರಿ ಶ್ರೀನಿವಾಸ್ ಅವರ ಮೇಲಿದ್ದರೂ, ಅನಾರೋಗ್ಯದಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದೆ, ಅಪರೂಪಕ್ಕೊಮ್ಮೆ ಕೂಲಿ ಕೆಲಸ ಮಾಡಿದ ವೇತನದಲ್ಲೇ ಜೀವನ ನಡೆಸುತ್ತಿದ್ದರು. ಇದೀಗ ಕುಟುಂಬದ ಸೂರು ಕುಸಿದುಬಿದ್ದಿರುವುದರಿಂದ ಕುಟುಂಬ ಕಂಗಾಲಾಗಿ ಹೋಗಿದೆ.
ಬಾಡಿಗೆ ಮನೆ ಒದಗಿಸಿದ ಕಿನ್ಯಾ ಪಂಚಾಯತ್ : ಘಟನಾ ಸ್ಥಳಕ್ಕೆ ಕಿನ್ಯಾ ಗ್ರಾಮ ಪಂಚಾಯಿತಿನ ಅಧ್ಯಕ್ಷೆ ಮಾಲಿನಿ ಮತ್ತು ಉಪಧ್ಯಕ್ಷ ಸಿರಾಜ್ ಕಿನ್ಯಾ ಭೇಟಿ ನೀಡಿದರು. ಬಳಿಕ ಕುಟುಂಬದ ಸ್ಥಿತಿಯನ್ನು ಅವಲೋಕಿಸಿ ಸಮೀಪದಲ್ಲೇ ಬಾಡಿಗೆ ಮನೆಯನ್ನು ಮಾಡಿಕೊಟ್ಟರು. ಅಲ್ಲದೆ ಮತ್ತೆ ಮನೆಯನ್ನು ದಾನಿಗಳ ಸಹಾಯದಿಂದ ಸಂಗ್ರಹಿಸಿದ ಹಣದಿಂದ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದು ಶೀಘ್ರವೇ ನಿರ್ಮಿಸುವ ಭರವಸೆಯನ್ನು ಉಪಾಧ್ಯಕ್ಷ ಸಿರಾಜ್ ಕಿನ್ಯಾ ನೀಡಿದರು.
ಸ್ಥಳಕ್ಕೆ ಸಮಾಜಸೇವಕ ನಾರಾಯಣ ಕಜೆ , ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮತ್ತು ಕಂದಾಯ ಅಧಿಕಾರಿ ಭೇಟಿ ನೀಡಿದರು.






