UN Networks
ಉಳ್ಳಾಲ: ಮೇಯಲು ಬಿಟ್ಟ ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ಸೇರಿದ ಹಸುವೊಂದನ್ನು ಕಳ್ಳರು ಕಳವುಗೈದಿರುವ ಘಟನೆ ಬುಧವಾರ ನಸುಕಿನ ಜಾವ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಮಂಗಳ ಸೇವಾ ಸಮಿತಿ ಟ್ರಸ್ಟಿಗೆ ಸೇರಿದ ಕುತ್ತಾರುಪದವಿನಲ್ಲಿರುವ ಬಾಲಸಂರಕ್ಷಣಾ ಕೇಂದ್ರಕ್ಕೆ ಸೇರಿದ ಹಸುವನ್ನು ಕಳವು ನಡೆಸಲಾಗಿದೆ. ಮಂಗಳವಾರ ಬೆಳಿಗ್ಗೆ ಮೇಯಲು ಬಿಟ್ಟಿದ್ದ ಹಲವು ಜಾನುವಾರುಗಳ ಪೈಕಿ ಹಸು ಸಂಜೆ ವೇಳೆ ಆಶ್ರಮಕ್ಕೆ ವಾಪಸ್ಸು ಬಂದಿರಲಿಲ್ಲ. ಆಶ್ರಮದ ಮಕ್ಕಳು ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಹಸುವಿಗಾಗಿ ತಡರಾತ್ರಿವರೆಗೂ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಿಗ್ಗೆ ಮಹಿಳೆಯೊಬ್ಬರು ಆಶ್ರಮಕ್ಕೆ ಫೋನಾಯಿಸಿ ಹಸುವನ್ನು ಸ್ವಿಫ್ಟ್ ಕಾರಿನಲ್ಲಿ ಹಾಕಿ ಕಳವುಗೈದಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಬೆಳಿಗ್ಗೆ ಹಸುವನ್ನು ಕಟ್ಟಿ ಹಾಕಿರುವ ಕಳ್ಳರು ರಾತ್ರಿ ವೇಳೆ ಕಳವುಗೈದಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಶ್ವ ಹಿಂದು ಪರಿಷತ್ ಮುಖಂಡ ಗೋಪಾಲ್ ಕುತ್ತಾರ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2014ರ ಡಿ.3 ರಂದು ಇದೇ ಆಶ್ರಮಕ್ಕೆ ಸೇರಿದ ಮೂರು ಜಾನುವಾರುಗಳನ್ನು ಹಟ್ಟಿಯಿಂದಲೇ ದುಷ್ಕರ್ಮಿಗಳು ಕಳವು ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿ ಆಶ್ರಮದ ಮಕ್ಕಳು ಕುತ್ತಾರುವಿನಲ್ಲಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮತ್ತು ಘಟನೆ ಮರುಕಳಿಸದಂತೆ ಒತ್ತಾಯಿಸಿ ಮೌನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.



