ಉಳ್ಳಾಲ ನ್ಯೂಸ್ ನೆಟ್ವರ್ಕ್
ಹರೇಕಳ :ಸರಕಾರದಿಂದ ಕೊಡಮಾಡುವ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮವು ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಸೈಕಲ್ಗಳನ್ನು ಹಸ್ತಾಂತರಿಸಿ ಮಾತನಾಡಿದ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನುರವರು ಕನ್ನಡ ಮಾಧ್ಯಮದ ಮಕ್ಕಳು ಬಹಳ ಆಸಕ್ತಿಯಿಂದ ಪ್ರತೀ ದಿನ ಶಾಲೆಗೆ ಹೋಗಬೇಕು. ಧೈರ್ಯ, ಏಕಾಗ್ರತೆ ಮತ್ತು ಉತ್ತಮ ಆರೋಗ್ಯವನ್ನು ಸದಾ ಹೊಂದಲು ಸೈಕಲ್ ತುಳಿಯುವುದು ಬಹಳ ಅವಶ್ಯ. ಈ ನಿಟ್ಟಿನಲ್ಲಿ ಸರಕಾರದ ಈ ಯೋಜನೆಯನ್ನು ಪ್ರತಿಯೋರ್ವರೂ ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮುದಲೆಮಾರು ಪ್ರಹ್ಲಾದ ರೈ ವಹಿಸಿದ್ದರು. ಶಾಲಾ ಸಂಚಾಲಕ ಜಯರಾಮ ಆಳ್ವ ಪೋಡಾರು, ಶಾಲಾ ಮುಖ್ಯೋಪಾಧ್ಯಾಯರಾದ ಕೆ.ರವೀಂದ್ರ ರೈ, ಹರೇಕಳ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅನಿತ ಡಿ’ಸೋಜ, ಶಿಕ್ಷಕರುಗಳಾದ ತ್ಯಾಗಂ ಹರೇಕಳ, ಉಷಾಲತ, ಮೋಹಿನಿ, ಕುಮುದ, ಸ್ಮಿತಾ, ನೂತನ, ಕೃಷ್ಣಶಾಸ್ತ್ರಿ, ರವಿಶಂಕರ್, ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.


