ಉಳ್ಳಾಲ ನ್ಯೂಸ್ ನೆಟ್ವರ್ಕ್
ಯೆನೆಪೋಯ: ದೇಶದಲ್ಲಿ ಮೊದಲ ಬಾರಿಗೆ ದಂತ ಭಾಗ್ಯ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಇದರ ಸದುಪಯೋಗವನ್ನು 10,000 ಮಂದಿ ಈಗಾಗಲೇ ಪಡೆದುಕೊಂಡಿದ್ದು ಇದು ದಂತ ವೈದ್ಯಕೀಯ ಕ್ಷೇತ್ರಕ್ಕೆ ಉತ್ತಮ ಸಂದೇಶವಾಗಿದೆ ಎಂದು ರಾಜ್ಯ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಸಾರ್ವಜನಿಕ ದಂತ ಚಿಕಿತ್ಸಾ ವಿಭಾಗ, ದೇರಳಕಟ್ಟೆ ಯೆನೆಪೋಯ ದಂತ ವೈದ್ಯಕೀಯ ಕಾಲೇಜು ಇದರ ವತಿಯಿಂದ ಯೆನೆಪೋಯ ವೈದ್ಯಕೀಯ ಕಾಲೇಜಿನ ಎಂಡ್ಯೂರೆನ್ಸ್ ಸಭಾಂಗಣದಲ್ಲಿ ನಡೆದ ಆನ್ ಆಪ್ಡೆಟ್ ಆನ್ ಓರಲ್ ಹೆಲ್ತ್ ಫಾಲಿಸಿ(ಕರ್ನಾಟಕ ರಾಜ್ಯ ಬಾಯಿ ಆರೋಗ್ಯದ ನೀತಿ ನಿಯಮಾವಳಿಯನ್ನು ನವೀಕರಣ) ಎಂಬ ವಿಷಯದ ಕುರಿತ ನಡೆದ ಒಂದು ದಿನದ ವಿಚಾರ ಸಂಕೀರ್ಣದ ಸಮಾರೋಪ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಬಾಯಿ ಆರೋಗ್ಯ ನೀತಿಯಡಿ ದಂತ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರ ಭಾಗವಾಗಿ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರ್ವೆ ಕೈಗೊಂಡಾಗ ವೈದ್ಯರ ಹಾಗೂ ಹಾಸಿಗೆಗಳ ಕೊರತೆ ಕಂಡುಬಂದಿತ್ತು.
ರಾಜ್ಯ, ಜಿಲ್ಲೆ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಹಾಗೂ ಬೆಡ್ ಗಳ ಕೊರತೆ ಇರುವ ಕುರಿತು ಸರ್ವೇ ಕಾರ್ಯದಿಂದ ತಿಳಿದುಬಂದಿತ್ತು. ಅದರಂತೆ ರಾಜ್ಯ ಆರೋಗ್ಯ ಇಲಾಖೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಲಾ 60,000 ವೇತನ ನಿಗದಿ ಮಾಡಿ 100 ವೈದ್ಯರನ್ನು ನೇಮಿಸಿತ್ತು. ಇದು ದೇಶದಲ್ಲೇ ಪ್ರಥಮವಾಗಿ ವೈದ್ಯರಿಗೆ ನಿಗದಿ ಮಾಡಿರುವ ದೊಡ್ಡ ಮೊತ್ತದ ವೇತನವಾಗಿದೆ.
ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದ್ದು, ಗ್ರಾಮೀಣ ಭಾಗದಲ್ಲಿ ವೈದ್ಯರು ಸೇವೆ ಮಾಡಲು ಒಪ್ಪುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಕ್ಲಿನಿಕ್ ನಡೆಸಲು ಇಚ್ಛಿಸುವ ವೈದ್ಯರಿಗೆ ರಾಜ್ಯ ಸರಕಾರದಿಂದ ಸಾಲವನ್ನು ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದಲ್ಲಿ ಆರೋಗ್ಯದ ಕುರಿತು ಬಹಳಷ್ಟು ತೊಂದರೆಗಳಿದ್ದು, ಇದನ್ನು ಮನಗಂಡು ಗ್ರಾಮೀಣ ಭಾಗದಲ್ಲಿರುವ 60ಕ್ಕಿಂತ ಹೆಚ್ಚಿನ ಹರೆಯದ ವೃದ್ಧರು ಉತ್ತಮವಾಗಿ ನಗುವಂತಾಗಬೇಕು ಹಾಗೂ ಬಾಯಿಗೆ ಸಂಬಂಧಿಸಿದ ಯಾವುದೇ ರೋಗಗಳು ಬಾರದಂತೆ ನೋಡಿಕೊಳ್ಳುವ ಉದ್ದೇಶದಿಂದ ಬಾಯಿ ಆರೋಗ್ಯ ನೀತಿಯಂತೆ ದಂತ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದೀಗ ಕೇಂದ್ರ ಸರಕಾರವೂ ಅದನ್ನೇ ಅನುಸರಿಸಿಕೊಂಡು ದೇಶಾದ್ಯಂತ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಕ್ಯಾನ್ಸರ್ ಕುರಿತ ಸಂಶೋಧನೆಗೆ ಕೋಟ್ಯಂತರ ವ್ಯಯಿಸುವ ಬದಲಾಗಿ ಅದನ್ನು ನಿಗ್ರಹಿಸುವ ಸಲುವಾಗಿ ರಾಜ್ಯ ಸರಕಾರ ಪ್ರಥಮವಾಗಿ ಗುಟ್ಕಾ ನಿಷೇಧ ಜಾರಿಗೊಳಿಸಿತ್ತು.
ರಾಜ್ಯದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸ್ಥಾಪಿಸಲು ರಾಯಚೂರು ಮತ್ತು ಮೈಸೂರು ಜಿಲ್ಲೆಗಳನ್ನು ಆರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ( ಡಬ್ಲ್ಯು ಹೆಚ್ ಒ) ಮಾರ್ಗದರ್ಶನದಂತೆ ಯೋಜನೆ ರೂಪಿಸಲಾಗಿದೆ. ಆರೋಗ್ಯ ರಕ್ಷಣೆ ಕುರಿತಂತೆ ಇದೊಂದು ಪೈಲಟ್ ಯೋಜನೆಯಾಗಿದ್ದು, ಶೀಘ್ರದಲ್ಲೇ ಜಾರಿಯಾಗಲಿದೆ. ಬಾಯಿ ಆರೋಗ್ಯದ ಕುರಿತು ವಿದ್ಯಾರ್ಥಿಗಳು ಹೆಚ್ಚಾಗಿ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ವಿನೂತನ ಶೈಲಿಯ ಚಿಕಿತ್ಸಾ ಕ್ರಮಗಳಲ್ಲಿ ಅಳವಡಿಸಿಕೊಳ್ಳಬೇಕಿದೆ . ಗ್ರಾಮೀಣ ಭಾಗದಲ್ಲಿ ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಜನರು ಬಳಲುತ್ತಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಕ್ಲಿನಿಕ್ ನಡೆಸಲು ಇಚ್ಛಿಸುವ ವೈದ್ಯರಿಗೆ ರಾಜ್ಯ ಸರಕಾರದಿಂದ ಸಾಲವನ್ನು ನೀಡಲಾಗುವುದು ಎಂದರು.
ಯೆನೆಪೋಯ ವಿವಿ ಕಾಲೇಜಿನ ಕುಲಪತಿ ವೈ. ಅಬ್ದುಲ್ ಕುಂಙ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯೆನೆಪೋಯ ವಿವಿಯ ಉಪಕುಲಪತಿ ಡಾ.ಎಮ್.ವಿಜಯ್ ಕುಮಾರ್, ಯೆನೆಪೋಯ ವಿವಿಯ ಕುಲಸಚಿವ ಡಾ.ಜಿ.ಶ್ರೀ ಕುಮಾರ್ ಮೆನನ್, ಕರ್ನಾಟಕ ರಾಜ್ಯ ಬಾಯಿ ಆರೋಗ್ಯದ ನೀತಿ ನಿಯಮಾವಳಿಯ ಅಧ್ಯಕ್ಷ ಡಾ.ಗಣೇಶ್ ಶೆಣೈ ಪಂಚ್ಮಾಲ್, ಕರ್ನಾಟಕ ರಾಜ್ಯ ಬಾಯಿ ಆರೋಗ್ಯದ ನೀತಿ ನಿಯಮಾವಳಿಯ ಉಪನಿರ್ದೇಶಕ ಡಾ. ಎ.ಕೆ.ಪ್ರಮೀಳಾ, ರಾಜ್ಯ ಆರೋಗ್ಯ ನೀತಿಯ ಸಲಹೆಗಾರ ಡಾ. ವಿ.ನವೀನ್ ಶಂಕರ್, ಯೆನೆಪೋಯ ದಂತ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಶ್ಯಾಮ್ ಭಟ್ ಉಪಸ್ಥಿತರಿದ್ದರು.
ಯೆನೆಪೋಯ ದಂತ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಚ್. ಶ್ರೀಪತಿ ರಾವ್ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕಿ ಡಾ. ರೇಖಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.ಡಾ ಪ್ರವೀಣ್ ಜೋಡಲ್ಲಿ ವಂದಿಸಿದರು.












