ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಅಂಬ್ಲಮೊಗರು: ಅಂಬ್ಲಮೊಗರು ಗ್ರಾಮ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಈ ಸಂದರ್ಭ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದರೂ ಇಂದಿಗೂ ಮನೆ, ನಿವೇಶನವಿಲ್ಲದ ಬಡ ಕುಟುಂಬ ಸಾಕಷ್ಟು ಇವೆ, ಬಡವರಿಗೆ ನಿವೇಶನ ಒದಗಿಸುವುದು ಗ್ರಾಮ ಪಂಚಾಯಿತಿ ಕರ್ತವ್ಯ. ಗ್ರಾಮದಲ್ಲಿ ಸರ್ಕಾರಿ ಜಮೀನು ಇಲ್ಲದಿದ್ದರೆ ಜಿಲ್ಲಾಧಿಕಾರಿಗೆ ನಿವೇಶನರಹಿತರ ಪಟ್ಟಿ ನೀಡಬೇಕಿದ್ದು, ಸರ್ಕಾರವೇ ಖಾಸಗಿ ಜಮೀನು ಖರೀದಿಸಿ ವಿತರಿಸುತ್ತದೆ, ಆದರೆ ಅಂಬ್ಲಮೊಗರು ಗ್ರಾಮದಿಂದ ಜಿಲ್ಲಾಧಿಕಾರಿಗೆ ಪಟ್ಟಿಯೇ ಹೋಗಿಲ್ಲ ಎಂದರು.
ರೈತ ಸಂಘ ಗ್ರಾಮ ಸಮಿತಿಯ ಕಾರ್ಯದರ್ಶಿ ಇಬ್ರಾಹಿಂ ಮದಕ ಮಾತನಾಡಿ, ಅಂಬ್ಲಮೊಗರುವಿನಲ್ಲಿ ಐದು ಎಕರೆ ಸರ್ಕಾರಿ ಜಮೀನು ಇದ್ದರೂ ನಿವೇಶನರಹಿತರಿಗೆ ನೀಡಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಏಳು ತಿಂಗಳಿಂದ ಮುಗಿದಿಲ್ಲ, ಎಲ್ಲೋ ಒಂದು ಮೂಲೆಯಲ್ಲಿ ಘಟಕ ನಿರ್ಮಿಸಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ, ಪಿಡಿಓ ಮಧ್ಯೆ ಇರುವ ವೈಮನಸ್ಸಿನಿಂದ ಗ್ರಾಮಸಭೆಯೂ ರದ್ದಾಗಿದೆ. ಇಬ್ಬರ ಜಗಳಕ್ಕೆ ಗ್ರಾಮಸ್ಥರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.
ಪಿಡಿಓ ಭರವಸೆ:
ಸ್ಥಳಕ್ಕೆ ಅಧಿಕಾರಿಗಳು ಬಂದು ಸ್ಪಷ್ಟ ಉತ್ತರ ನೀಡದೆ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭ ಪಿಡಿಓ ಸ್ಥಳಕ್ಕೆ ಆಗಮಿಸಿ ಗ್ರಾಮದಲ್ಲಿರುವ 380 ಬಡವರ ಪಟ್ಟಿ ತಯಾರಿಸಲಾಗಿದ್ದು, ಅತ್ಯಂತ ಬಡತನದಲ್ಲಿರುವ 80 ಮಂದಿ ಪಟ್ಟಿಯನ್ನು ನಿವೇಶನಕ್ಕಾಗಿ ತಹಸೀಲ್ದಾರ್‍ಗೆ ನೀಡಲಾಗಿದೆ. ಸರ್ವೇ ನಂಬ್ರ 67ರಲ್ಲಿ ಮೂರು ಎಕರೆ ಜಮೀನಿದ್ದರೂ 50-60 ಮಂದಿಗೆ ಮಾತ್ರವೇ ನಿವೇಶನ ನೀಡಲು ಸಾಧ್ಯ ಎಂದು ಇಂಜಿನಿಯರ್ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ರೈತ ಸಂಘ ಗ್ರಾಮ ಸಮಿತಿ ಅಧ್ಯಕ್ಷ ಕಮಲಾಕ್ಷ ಶೆಟ್ಟಿ, ಉಳ್ಳಾಲ ವಲಯ ಕಾರ್ಯದರ್ಶಿ ಜಯಂತ್ ನಾಯಕ್, ಜಯಂತ ಪೂಜಾರಿ, ಉಪಾಧ್ಯಕ್ಷ ಉಮೇಶ್, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.



