ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ : ಉಳ್ಳಾಲ ಭಾಗದಲ್ಲಿ ಮಳೆಗಾಲ ಆರಂಭಗೊಂಡಾಗ ವಿದ್ಯುತ್ ಸಮಸ್ಯೆ ಗಂಭೀರವಾಗಿ ಸಾರ್ವಜನಿಕರು ಮೆಸ್ಕಾಂ ಛೀಮಾರಿ ಹಾಕುತ್ತಿದ್ದರು, ಆದರೆ ದಯಾನಂದ ಅವರ ಆಗಮನದ ಬಳಿಕ ಸಮಸ್ಯೆಗಳು ಪರಿಹಾರಗೊಂಡಿರುವುದು ಸಂತಸದ ವಿಚಾರ ಎಂದು ಮೆಲಗಂಡಿ ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ವಕ್ತಾರ ಫಾರೂಕ್ ಉಳ್ಳಾಲ್ ಹೇಳಿದರು.
ಉಳ್ಳಾಲ ಜನಹಿತ ಪೌರ ಸಮಿತಿ ಆಶ್ರಯದಲ್ಲಿ ಚೆಂಬುಗುಡ್ಡೆಯಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಉಳ್ಳಾಲ ಉಪವಿಭಾಗದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಬಿ.ದಯಾನಂದ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಹಿಂದೆಲ್ಲಾ ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ಜೊತೆ ಸಿಬ್ಬಂದಿಯಿಂದ ಅನುಚಿತ ವರ್ತನೆಗಳೂ ನಡೆಯುತ್ತಿದ್ದು ಜನರು ಮೆಸ್ಕಾಂ ಸೇವೆಯಿಂದ ಬೇಸತ್ತಿದ್ದರು. ದಯಾನಂದ ಆಗಮನದ ಬಳಿಕ ಉಳ್ಳಾಲ ನಗರಸಭೆಯಿಂದ ಯಾರೂ ವಹಿಸದ ದಾರಿದೀಪ ಸ್ವತಃ ಮೆಸ್ಕಾಂನಿಂದಲೇ ನಿರ್ವಹಿಸುವ ಮೂಲಕ ಉಳ್ಳಾಲದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಯಾವುದೇ ಸಮಯದಲ್ಲೂ ವಿದ್ಯುತ್ ಸಮಸ್ಯೆ ಎದುರಾದಾಗ ತಕ್ಷಣವೇ ಸಿಬ್ಬಂದಿ ಕಾರ್ಯನಿರ್ವಹಿಸುವುದು ನೆಮ್ಮದಿ ತಂದಿದೆ ಎಂದರು.
ಅಭಿನಂದನೆ ಸ್ವೀಕರಿಸಿದ ಬಿ.ದಯಾನಂದ ಮಾತನಾಡಿ, ಮೆಸ್ಕಾಂ ಎನ್ನುವುದು ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದು, ಸಿಬ್ಬಂದಿ ಯಾವುದೇ ಸಮಯದಲ್ಲೂ ಸೇವೆಗೆ ಲಭ್ಯ, ಅಭಿನಂದನೆ ಮೂಲಕ ತಮ್ಮ ಮೇಲೆ ಇನ್ನಷ್ಟು ಜವಾಬ್ದಾರಿ ಹೊರಿಸಲಾಗಿದೆ ಎಂದರು.
ಜನಹಿತ ಪೌರ ಸಮಿತಿ ಅಧ್ಯಕ್ಷ ಬಾವಾ ಫಕೀರ್ ಸಾಬ್, ಕಾರ್ಯಾಧ್ಯಕ್ಷ ಕೆ.ಎಸ್.ಮೊಯಿದ್ದೀನ್, ಸಂಚಾಲಕ ಯು.ಬಿ.ಸಿದ್ದೀಕ್, ಉಪಾಧ್ಯಕ್ಷ ಮಹಮ್ಮದ್ ಹಸನ್ ದೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಂ ಮುಟ್ಟಿಕ್ಕಲ್, ಕೋಶಾಧಿಕಾರಿ ಮಹಮ್ಮದ್ ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.




