ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಯುವಕನೋರ್ವ ಮನೆ ಆವರಣದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಪಲ ಮೂರುಕಟ್ಟೆ ಸಮೀಪದ ಬಲ್ಯ ರಸ್ತೆಯಲ್ಲಿ ಬುಧವಾರ ನಸುಕಿನ ಜಾವ ಬೆಳಕಿಗೆ ಬಂದಿದೆ.
ಕೆಎಸ್ಆರ್ಟಿಸಿಯ ನಿವೃತ್ತ ಉದ್ಯೋಗಿ ಶಿವರಾಮ ಎಂಬವರ ಪುತ್ರ ಧನಂಜಯ (30) ಆತ್ಮಹತ್ಯೆಗೈದವರು. ಮಂಗಳವಾರ ರಾತ್ರಿ ಊಟ ಮುಗಿಸಿ ಮಲಗಿದ್ದ ಅವರು ಮಂಗಳವಾರ ನಸುಕಿನ ಜಾವ ಮನೆ ಹಿಂಬದಿಯಲ್ಲಿರುವ ಹೆಚ್ಚುವರಿ ಕೊಠಡಿಯ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸಾವಿಗೆ ತಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಧನಂಜಯ್, ಆರ್ಥಿಕ ಅಡಚಣೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ.
ವಾರದ ಹಿಂದಷ್ಟೇ ಸಹೋದರಿಯ ವಿವಾಹ ಸಮಾರಂಭ ಮನೆಯಲ್ಲಿ ನಡೆದಿದ್ದು, ಅದಕ್ಕಾಗಿ ಹಾಕಿದ್ದ ತೋರಣಗಳು ಇನ್ನೂ ತೆಗೆಯುವ ಮುನ್ನವೇ ಧನಂಜಯ ಸಾವನ್ನಪ್ಪಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



