ಉಳ್ಳಾಲ ನ್ಯೂಸ್ ನೆಟ್‍ವರ್ಕ್
ತೊಕ್ಕೊಟ್ಟು: ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯೂತ್ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಮಂಗಳವಾರ ಚುನಾವಣೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್‍ನ ತೊಕ್ಕೊಟ್ಟಿನಲ್ಲಿರುವ ಕಚೇರಿಯಲ್ಲಿ ನಡೆದಿದ್ದು ಚುನಾವಣೆ ವೇಳೆ ಪೊಲೀಸರು ಮತ್ತು ಅಭ್ಯರ್ಥಿಪರ ಬೆಂಬಲಿಗರ ಮಧ್ಯ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.
ಯೂತ್ ಕಾಂಗ್ರೆಸ್‍ನ ರಾಜ್ಯ, ಜಿಲ್ಲೆ ಮತ್ತು ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಬಿರುಸಿನ ಸ್ಪರ್ಧೆ ಏರ್ಪಟಿದ್ದು ಮಂಗಳೂರು ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದು, ಜಿಲ್ಲಾ ಯೂತ್ ಕಾಂಗ್ರೆಸ್‍ಗೆ ಮೂವರು ಸ್ಪರ್ಧಿಗಳಿದ್ದಾರೆ.
ಬೆಳಗ್ಗಿನಿಂದಲೇ ಸ್ಪರ್ಧಿಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದರೆ ಮಧ್ಯಾಹ್ನದ ವೇಳೆಗೆ ಝೆರಾಕ್ಸ್ ಪ್ರತಿಯ ಗುರುತಿನ ಚೀಟಿ ನೀಡಿ ಇಬ್ಬರು ಮತದಾರರು ಒಳಗೆ ಹೋಗಿದ್ದಾರೆ ಎಂದು ಆರೋಪಿಸಿ ರಾಜ್ಯದಿಂದ ನಿಯುಕ್ತಿಗೊಂಡಿದ್ದ ಕಾಂಗ್ರೆಸ್ ಏಜೆಂಟ್ ಒಬ್ಬರಲ್ಲಿ ತಗಾದೆ ತೆಗೆದ ಒಂದು ಗುಂಪು ಮತದಾನ ಕೇಂದ್ರದೊಳಗೆ ನುಗ್ಗಲು ಪ್ರಯತ್ನಿಸಿದಾಗ ಮಫ್ತಿಯಲ್ಲಿದ್ದ ಪೊಲೀಸರು ತಡೆದಾಗ ಪೊಲೀಸರ ಮತ್ತು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಉಳ್ಳಾಲ ಇನ್ಸ್‍ಪೆಕ್ಟರ್ ಗೋಪಿಕೃಷ್ಣ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಪೊಲೀಸರು ಸೇರಿದ್ದ ಗುಂಪನ್ನು ಚದುರಿಸಲು ಹರಸಾಹಸ ಪಡಬೇಕಾಯಿತು. ಮೂರು ಗಂಟೆಯವರೆಗೆ ಮತದಾನ ನಡೆದಿದ್ದು, ಬಳಿಕ ಬೆಂಬಲಿಗರನ್ನು ಚದುರಿಸಲಾಯಿತು.
ಉಳ್ಳಾಲ ಸೇರಿದಂತೆ ಕೆಎಸ್‍ಆರ್‍ಪಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.




