ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಪಾವೂರು: ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರ ಸಮಾಪನ ನಗರ ಪ್ರದೇಶದಲ್ಲಿ ಶ್ರೀವಂತರು ಹೆಚ್ಚಿದ್ದು ಅವರಿಗೆ ಸಮ್ಮರ್ ಕ್ಯಾಂಪ್ ಹೆಸರಲ್ಲಿ ಶಿಬಿರ ನಡೆಯುತ್ತದೆ, ಅದೇ ರೀತಿ ಗ್ರಾಮೀಣ ಭಾಗದಲ್ಲಿರುವ ಬಡಮಕ್ಕಳಿಗೆ ಇಲಾಖೆಯಿಂದ ನಡೆಯುವ ಬೇಸಿಗೆ ಶಿಬಿರ ಅತ್ಯಂಯ ಪ್ರಯೋಜನಕಾರಿ ಎಂದು ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಫಿರೋಜ್ ಅಭಿಪ್ರಾಯಪಟ್ಟರು.
ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಪಾವೂರು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಶನಿವಾರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಮಕ್ಕಳಲ್ಲೂ ವಿಭಿನ್ನ ಪ್ರತಿಭೆಗಳಿದ್ದು ಪ್ರದರ್ಶನ ಹಾಗೂ ಬೆಳೆಸಲು ಶಿಬಿರ ಉತ್ತಮ ವೇದಿಕೆ, ಇದರಲ್ಲಿ ಭಾಗವಹಿಸುವ ಮಕ್ಕಳು ತಮ್ಮಲ್ಲಿರುವ ಪ್ರತಿಭೆ ಮುಂದೆಯೂ ಉಳಿಸುವ ನಿಟ್ಟಿನಲ್ಲಿ ಮುಂದೆ ನಡೆಯುವ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಸಾಕಾರಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮಂಗಳಗಂಗೋತ್ರಿ ಜೆಸಿಐ ಅಧ್ಯಕ್ಷ ಬಾದ್‍ಶಾ ಸಾಂಬಾರ್‍ತೋಟ ಮಾತನಾಡಿ, ಶಿಬಿರಗಳಲ್ಲಿ ಭಾಗವಹಿಸುವುದರಿಂದ ಜೀವನದ ಮುಂದಿನ ದಿನಗಳಲ್ಲಿ ನಮ್ಮಲ್ಲಿನ ನಡವಳಿಕೆ ತಿದ್ದಿಕೊಳ್ಳಲು ಸಹಾಯಕವಾಗಿರುತ್ತದೆ, ಪಡೆದ ಅನುಭವ ಜೀವನದಲ್ಲಿ ಅಳವಡಿಸಿಕೊಂಡಾಗ ಶಿಬಿರ ಅಯೋಜನೆ ಸಾಕಾರಿಯಾಗುತ್ತದೆ ಎಂದರು.
ಸಮಾಜ ಸೇವಕ ಶಂಕರಾನಂದ ಎನ್.ಇನವಳ್ಳಿ ಮಾತನಾಡಿ, ಯಾವುದೇ ಕಾರ್ಯಕ್ರಮಗಳಲ್ಲೂ ಪ್ರಸಿದ್ಧ ಕಲಾವಿದರು ಭಾಗವಹಿಸಬೇಕಾದರೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ, ಆದರೆ ಶಿಬಿರಗಳಲ್ಲಿ ಉಚಿತವಾಗಿ ತರಬೇತಿ ಸಿಗುವುದರಿಂದ ಇದೊಂದು ಉತ್ತಮ ವೇದಿಕೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಬಿರ ಯಶಸ್ಸಿಗೆ ಶ್ರಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾರತಿ ಪಟಾಗಾರ ಅವರನ್ನು ಪಾವೂರು ಗ್ರಾ.ಪಂ. ವತಿಯಿಂದ ಸನ್ಮಾನಿಸಲಾಯಿತು. ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ, ಅಂಗನವಾಡಿ ಮೇಲ್ವಿಚಾರಕಿಯರಾದ ಭಾರತಿ, ಶಂಕರಿ, ಪೂರ್ಣಿಮಾ ಹಾಗೂ ಮಾಲಿನಿ ಉಪಸ್ಥಿತರಿದ್ದರು.
ಶಿಭಿರಾರ್ಥಿ ಸಮೀರಾ ಸ್ವಾಗತಿಸಿದರು. ಹಬೀಬಾ ಹಾಗೂ ಸಹನಾ ಅನುಭವ ಹಂಚಿಕೊಂಡರು. ತಾಜುನ್ನಿಸಾ ಹಾಗೂ ಪವಿತ್ರಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.
`ಸನ್ಮಾನ ಎನ್ನುವುದು ನಮ್ಮಲ್ಲಿ ಜವಾಬ್ದಾರಿ ಇನ್ನಷ್ಟು ಹೆಚ್ಚಿಸುತ್ತದೆ, ಮೇಲ್ವಿಚಾರಕಿಯರೆಂದರೆ ಪಾತ್ರಧಾರಿಗಳು ಮಾತ್ರವೇ ಆಗಿದ್ದು, ನಮ್ಮಲ್ಲಿ ಆಗುವ ತಪ್ಪುಗಳನ್ನು ತಿದ್ದುವ ಮೇಲಧಿಕಾರಿಗಳು ಸೂತ್ರಧಾರಿಗಳಾಗಿದ್ದಾರೆ’
ಭಾರತಿ ಪಟಾಗಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ


