ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಉಳ್ಳಾಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಸೋಮೇಶ್ವರ ಬಾಸ್ರಿತ್ತಾಯಬೈಲಿನಲ್ಲಿ ತೆಂಗಿನಮರಕ್ಕೆ ಬಡಿದ ಸಿಡಿಲಿನಿಂದ ಮನೆಯೊಂದಕ್ಕೆ ಹಾನಿಯಾಗಿದ್ದು, ಮನೆಮಂದಿ ಪವಾಡಸದೃಶ್ಯವಾಗಿ ಪಾರಾಗಿದ್ದಾರೆ.
ಸೋಮೇಶ್ವರ ಬಾಸ್ರಿತ್ತಾಯ ಬೈಲಿನ ಲಕ್ಷ್ಮಣ್ ಸೋಮೇಶ್ವರ ಎಂಬವರ ಮನೆಗೆ ಹಾನಿಯಾಗಿದ್ದು, ಮನೆಯಲ್ಲಿ ಸುಮಾರು ಏಳು ಮಂದಿ ಮಲಗಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಅವರಲ್ಲಿ ಐದು ಮಂದಿಗೆ ಸಿಡಿಲಿನ ಅಘಾತಕ್ಕೆ ಮೈಯಲ್ಲಿ ವಿದ್ಯುತ್ ಸಂಚಾರ ಆದಂತೆ ಅನುಭವವಾಗಿದ್ದು, ಶರತ್ ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದೆ.
ತೆಂಗಿನ ಮರಕ್ಕೆ ಸಿಡಿಲು ತಪ್ಪಿದ ದುರಂತ : ಲಕ್ಷ್ಮಣ್ ಅವರ ಮನೆಯ ಎದುರಿಗಿದ್ದ ತೆಂಗಿನ ಮರಕ್ಕೆ ಬಿದ್ದ ಪರಿಣಾಮ ತೆಂಗಿನ ಮರ ಸಂಪೂರ್ಣ ಮುದುಡಿದ್ದು, ಅಕ್ಕಪಕ್ಕದ ಸುಮಾರು ಎಂಟಕ್ಕೂ ಹೆಚ್ಚು ತೆಂಗಿನಮರಕ್ಕೆ ಹಾನಿಯಾಗಿದೆ. ತೆಂಗಿನ ಮರದಿಂದ ಸಿಡಿಲಿನ ಅಘಾತ ಮನೆಗೆ ತಾಗಿದ್ದು ಮನೆಯಲ್ಲಿದ್ದ ವಿದ್ಯುತ್ ಸಂಬಂ„ ವಸ್ತುಗಳು ಸಂಪೂರ್ಣ ಹಾನಿಯಾಗಿದೆ. ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮನೆಗೆ ದೊಡ್ಡ ಹಾನಿಯಾಗದೆ ಮನೆಯ ಸದಸ್ಯರು ಸಣ್ಣಪುಟ್ಟ ಗಾಯಗಳಿಂದ ಪವಾಡ ಸದೃಶ್ಯವಾಗಿ ಪಾರಾದರು.
ಕುಸಿದ ತಡೆಗೋಡೆ : ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಸಂಕೋಳಿಗೆ ಬಳಿ ಹೆದ್ದಾರಿಯಿಂದ ಹರಿದ ನೀರು ಸ್ವಾತಂತ್ರ್ಯ ಹೋರಾಟಗಾರ ದಿ. ಕರುಣಾಕರ ಉಚ್ಚಿಲ ಅವರ ಮನೆಗೆ ನುಗ್ಗಿದ್ದರಿಂದ ಮನೆಯ ಆವರಣ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಬಳಿಯ ಅನೇಕ ಮನೆಗಳ ಕಂಪೌಂಡ್ ಒಳಗೆ ನೀರು ನುಗ್ಗಿದ್ದು ಹೆದ್ದಾರಿ ಇಲಾಖೆಯ ಅ„ಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತ್ ಸದಸ್ಯ ರವಿಶಂಕರ್ ಸೋಮೇಶ್ವರ, ಪಂಚಾಯತ್ ಆಧ್ಯಕ್ಷ ರಾಜೇಶ್ ಉಚ್ಚಿಲ್ ಘಟನಾ ಸ್ಥಳಕ್ಕೆ ಆಗಮಿಸಿದ್ದರು.








