ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: “ಉತ್ತಮ ಯುವಕನಾಗಿರುವುದೇ ದೇಶದ ಅತಿದೊಡ್ಡ ಆಸ್ತಿಯಾಗಿದೆ. ಶಿಕ್ಷಣದ ಅಂತಿಮ ಉದ್ದೇಶವು ಜೀವನದಲ್ಲಿ ಕಷ್ಟಗಳನ್ನು ನಿವಾರಿಸಲು ನಮಗೆ ತರಬೇತಿ ನೀಡುವುದು ಮತ್ತು ಇದು ನಿಮ್ಮ ವ್ಯಕ್ತಿತ್ವದಲ್ಲಿ ಪ್ರತಿಫಲಿಸಬೇಕು” ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ಹೇಳಿದರು.
ಅವರು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್), ರಾಷ್ಟ್ರೀಯ ಯುವಜನ ಯೋಜನೆ ಮತ್ತು ಯುವಜನ ವ್ಯವಹಾರಗಳ ಸಚಿವಾಲಯ, ಕರ್ನಾಟಕ ಸರಕಾರ ಇವುಗಳ ಜಂಟಿಯಾಗಿ ದೇರಳಕಟ್ಟೆ ಯೆನೆಪೋಯ ವಿ.ವಿಯ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಯುವಜನ ರಾಷ್ಟ್ರೀಯ ಐಕ್ಯತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಯುವ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು.
ತನ್ನ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಸಕ್ರಿಯ ಎನ್ಎಸ್ಎಸ್ ಸ್ವಯಂಸೇವಕರಾಗಿದ್ದಾಗ ತಾವು ಯುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಮತ್ತು ಈ ಅನುಭವ ನಂತರ ಸಾರ್ವಜನಿಕ ಜೀವನವನ್ನು ಮುಂದುವರಿಸಲು ಅವರನ್ನು ಪ್ರೇರೇಪಿಸಿತು ಎಂದು ಅವರು ಹೇಳಿದರು. “ವಾಸಿಸಲು ಅತ್ಯುತ್ತಮ ದೇಶ ಭಾರತ. ನಮ್ಮ ದೇಶದ ವೈವಿಧ್ಯತೆಯಿಂದಾಗಿ, ನಾವು ಅನೇಕ ಹಬ್ಬ, ಉತ್ಸವಗಳನ್ನು ಆಚರಿಸಲು ಪ್ರತಿ ತಿಂಗಳು ಯಾವುದಾದರೂ ಅವಕಾಶ ಇದ್ದೇ ಇರುತ್ತದೆ. ಭಾರತ ಮಾನವೀಯತೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಸಾಗುತ್ತಿದೆ, ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಆದಾಯ ಮತ್ತು ತೆರಿಗೆಗಳ ವಿಚಾರಗಳಿಂದ ಉಲ್ಬಣಗೊಂಡಿವೆ,” ಎಂದು ಅವರು ಹೇಳಿದರು.
ಭಗವಾನ್ ರಾಮನ ಉದಾಹರಣೆಯನ್ನು ನೀಡಿ, ಶ್ರೀ ರಾಮನು ತಾನು ರಾಜಕುಮಾರನಾಗಿದ್ದರೂ ತನ್ನ ಎಲ್ಲ ಸೌಕರ್ಯ, ಸವಲತ್ತುಗಳನ್ನು ಬಿಟ್ಟು ಚಿಕ್ಕ ವಯಸ್ಸಿನಲ್ಲಿ ಸತತ ಕಷ್ಟಗಳನ್ನು ಎದುರಿಸಬೇಕಾಯಿತು, ಎಂದ ಅವರು “ಇಂದು ಶ್ರೀ ರಾಮನಿಗೆ ಪ್ರೀತಿ ಮತ್ತು ಆರಾಧನೆ ಇದೆ ಏಕೆಂದರೆ ಅವರು ಎಲ್ಲಾ ಕಷ್ಟಗಳನ್ನು ಶಾಂತ ಮತ್ತು ಚಿಂತನಶೀಲ ಮನಸ್ಸಿನಿಂದ ಸ್ವತಃ ಎದುರಿಸಿದ್ದರು ಎಂದರು.
ರಾಷ್ಟ್ರೀಯ ಯುವಜನ ಯೋಜನೆ ನಿರ್ದೇಶಕ ಡಾ. ಎಸ್. ಎನ್. ಸುಬ್ಬರಾವ್ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎನ್. ವಿನಯ್ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಯೇನಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಂ ವಿಜಯ್ ಕುಮಾರ್ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಿಲಾಗ್ರಿಸ್ ಚರ್ಚ್, ಮಂಗಳೂರು ಇಲ್ಲಿನ ಧವರ್iಗುರು ಫಾ. ವೆಲೇರಿಯನ್ ಡಿ’ಸೋಜ ಮತ್ತು ಉದ್ಯಮಿ ಅನಿಲ್ ಭಂಡಾರಿ ಉಪಸ್ಥಿತರಿದ್ದರು.
ಯೆನೆಪೋಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಶ್ರೀಕುಮಾರ್ ಮೆನನ್ ಸ್ವಾಗತಿಸಿದರು. ಶಿಬಿರದ ಸಂಘಟನಾ ಕಾರ್ಯದರ್ಶಿ ರಾಷ್ಟ್ರೀಯ ಯುವ ಯೋಜನೆಯ ಅನಲ್ ಹೆಬ್ಬಾರ್ ಅವರು ವಾರಾಂತ್ಯದ ಶಿಬಿರದ ವರದಿಯನ್ನು ಮಂಡಿಸಿದರು. ಯೇನಪೋಯ ವಿವಿಯ ಎನ್ಎಸ್ಎಸ್ ಸಂಯೋಜಕಿ ಡಾ. ಅಶ್ವಿನಿ ಎಸ್. ಶೆಟ್ಟಿ ವಂದಿಸಿದರು.
ಶಿಬಿರದಲ್ಲಿ 19 ರಾಜ್ಯಗಳಿಂದ ಸುಮಾರು 350 ಎನ್ಎಸ್ಎಸ್ ಸ್ವಯಂಸೇವಕರು, ಎನ್ವೈಪಿ ರಾಜ್ಯ ಸಂಘಟಕರು, ಎನ್ಎಸ್ಎಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಈ ಒಂದು ವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯೇನಪೋಯ ವಿಶ್ವವಿದ್ಯಾಲಯದ 120 ವಿದ್ಯಾರ್ಥಿಗಳೂ ಶಿಬಿರದಲ್ಲಿ ಭಾಗವಹಿಸಿದ್ದಾರೆ.






