ಉಳ್ಳಾಲ ನ್ಯೂಸ್ ನೆಟ್ ವರ್ಕ್
ಮುನ್ನೂರು: ಸರಕಾರದಿಂದ ತ್ಯಾಜ್ಯ ವಿಲೇವಾರಿಗೆ ಕೋಟ್ಯಂತರ ಅನುದಾನ ಬಿಡುಗಡೆಯಾಗಿದ್ದರೂ, ಸಮರ್ಪಕ ತ್ಯಾಜ್ಯ ವಿಲೇವಾರಿ ನಡೆಯದೆ ಅಧಿಕಾರಿಗಳು ಬೇಜವಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಿರಾಜ್ ಅಡ್ಕರೆ ಹೇಳಿದ್ದಾರೆ.
ಅವರು ತುಳುನಾಡು ರಕ್ಷಣಾ ವೇದಿಕೆ ಮುನ್ನೂರು ಗ್ರಾಮ ಪಂಚಾಯಿತಿ ಎದುರುಗಡೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಚ್ಛ ಮಂಗಳೂರು ವಿಧಾನಸಭಾ ಕ್ಷೇತ್ರ ಆಂದೋಲನದಡಿ ಪ್ರಥಮ ಹೋರಾಟವನ್ನು ಮುನ್ನೂರಿನಿಂದ ಆರಂಭಿಸಲಾಗಿದೆ. ಪಂಚಾಯಿತಿಗೆ ತ್ಯಾಜ್ಯಕ್ಕೆ ಸಂಬಂಧಿಸಿ ರೂ.28 ಲಕ್ಷ ಅನುದಾನ ಬಿಡುಗಡೆಯಾಗಿದ್ದರೂ ಅದರ ಉಪಯೋಗವಾಗಿಲ್ಲ. ಬಿಪಿಎಲ್ ಕಾರ್ಡುಗಳು ಶ್ರೀಮಂತರ ಕಪಾಟಿನಲ್ಲಿದ್ದು, ಬಡವರು ¸ ಕಾರ್ಡಿಗಾಗಿ ದಿನಗಟ್ಟಲೆ ಅಲೆದಾಡುವ ಸ್ಥಿತಿಯಿದೆ. ಶ್ರೀಮಂತ ಜನ ಮಾನವೀಯತೆಗೆ ಸ್ಪಂಧಿಸಿ ಬಡವರಿಗೆ ಬಿಪಿಎಲ್ ಕಾರ್ಡು ದೊರೆಯುವಂತೆ ವರ್ತಿಸಬೇಕಿದೆ. ಈ ಹಿಂದೆ ಪಂಚಾಯಿತಿಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಲಾಗಿತ್ತು. ಆದರೆ ಸ್ಪಂಧಿಸದ ಹಿನ್ನೆಲೆಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ . ಇದಕ್ಕೂ ಸ್ಪಂಧಿಸದೇ ಇದ್ದಲ್ಲಿ ಉಗ್ರ ಹೋರಾಟವನ್ನು ಪಂಚಾಯಿತಿ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ತುಳುನಾಡು ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಮಾತನಾಡಿ ಮುನ್ನೂರು ಪಂಚಾಯಿತಿ ಭಾಗದಲ್ಲಿ ಪ್ರತಿದಿನ ಮನೆಗಳಿಗೆ ತೆರಳಿ ತ್ಯಾಜ್ಯ ಸಂಗ್ರಹವಾಗುತ್ತಿಲ್ಲ. ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ, ಮದನಿನಗರ ಮಸೀದಿ ಬಳಿ ಮಳೆನೀರು ರಸ್ತೆಯಲ್ಲಿಯೇ ಹರಿದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ, ಕುತ್ತಾರು ಸರಕಾರಿ ಶಾಲೆಯ ಆವರಣದಲ್ಲಿಯೂ ಮಳೆ ನೀರು ಇಕ್ಕಟ್ಟಾಗಿ ಮಕ್ಕಳು ಶಾಲೆಗೆ ರಜೆ ಮಾಡುವ ಸ್ಥಿತಿಯಿದ್ದರೆ, ಇನ್ನೊಂದೆಡೆ ಸ್ಥಳೀಯ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳ ಕೊಳಚೆ ನೀರು ಇದೇ ಶಾಲೆಯ ಆವರಣದಲ್ಲಿ ಹರಿದಾಡಿ ಮಕ್ಕಳಿಗೆ ಅನಾರೋಗ್ಯವನ್ನು ಸೃಷ್ಟಿಸುವ ಭೀತಿಯಿದೆ. ಕುತ್ತಾರು ಜಂಕ್ಷನ್ನಿನಲ್ಲಿ ಖಾಸಗಿ ವಾಹನಗಳು ಎಲ್ಲೆಂದರೆಲ್ಲಿ ಪಾರ್ಕಿಂಗ್ ನಡೆಸುತ್ತಿದ್ದರೆ, ರಿಕ್ಷಾ ಪಾರ್ಕಿಂಗ್ ಗೂ ಸರಿಯಾದ ಜಾಗವಿಲ್ಲದೆ, ರಿಕ್ಷಾ ಚಾಲಕರು ದುಡಿಯದ ಸ್ಥಿತಿ ಇದೆ ಎಂದು ಆರೋಪಿಸಿದ ಅವರು ತು.ರವೇ ತುಳುವರಿಗೆ ಇರುವ ಸಂಘಟನೆಯಾಗಿದ್ದು, ಜಾತಿಮತಬೇಧವಿಲ್ಲದೆ ತುಳುವರ ನ್ಯಾಯಕ್ಕಾಗಿ ಹೋರಾಡುತ್ತಿದೆ ಎಂದರು.
ಈ ಸಂದರ್ಭ ರಹೀಂ ಕುತ್ತಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿಕಾ ಜೈನ್, ವಿದ್ಯಾ ಯು.ಜೋಗಿ, ರಾಜೇಶ್ ಕುತ್ತಾರ್, ಅರುಣ್ ಡಿಸೋಜಾ, ಲಿಯೋ ಡಿಸೋಜಾ, ಆನಂದ್ ಅಮೀನ್ ಅಡ್ಯಾರ್, ಜಗದೀಶ್, ಜಮಾಲ್ ಮೊದಲಾದವರು ಇದ್ದರು.
ಪ್ರತಿಭಟನಾ ಬಳಿಕ ಮನವಿಯವನ್ನು ಸ್ವೀಕರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುದೀರ್ ಮಾತನಾಡಿ ತ್ಯಾಜ್ಯ ವಿಲೇವಾರಿಗೆ ಮೂರು ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಎರಡು ರದ್ದುಗೊಂಡು ವಿಳಂಬಾಗಿದ್ದು, ಇದೀಗ 3 ನೇ ಟೆಂಡರ್ ಸಮ್ಮತಿಯಾಗಿದೆ. ಸಮಸ್ಯೆಗಳ ಕುರಿತು ನಡೆಯುವ ಸಭೆಗಳಲ್ಲಿ ಚರ್ಚೆಗಳೇ ನಡೆದು ಉಪಯೋಗಕ್ಕೆ ಬರುತ್ತಿಲ್ಲ. ವಾರ್ಡು ಸಭೆಗಳಲ್ಲಿ ವೀಡಿಯೋ ಪ್ರದರ್ಶನ ಮಾಡುವ ಮೂಲಕ ತ್ಯಾಜ್ಯದ ಕುರಿತು ಮನೆಮಂದಿಗೆ ಜಾಗೃತಿ ಮೂಡಿಸಲಾಗಿದೆ. ಆದರೆ ಜನರೇ ಸ್ಪಂಧಿಸದೆ ಸಮಸ್ಯೆ ಉದ್ಭವಿಸಿದೆ. ಮುಂದಿನ ತಿಂಗಳ ಒಳಗೆ ಸಮರ್ಪಕವಾಗಿ ವಿಲೇವಾರಿ ಮಾಡಲಾಗುವುದು ಎಂದರು.


