ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಹೊಟೇಲ್ ಕಾರ್ಮಿಕನೋರ್ವ ಸಹುದ್ಯೋಗಿ ಇಬ್ಬರು ಕಾರ್ಮಿಕರಿಗೆ ಚೂರಿಯಿಂದ ಇರಿದಿರುವ ಘಟನೆ ದೇರಳಕಟ್ಟೆ ಸಮೀಪದ ಶಾಂತಿಭಾಗ್‍ನ ಖಾಸಗಿ ಲಾಡ್ಜಿನಲ್ಲಿ ಸಂಭವಿಸಿದ್ದು, ಈ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಿಹಾರ ಮೂಲದ ನಿತೇಶ್ (25) ಸ್ಥಿತಿ ಚಿಂತಾಜನಕವಾಗಿದ್ದು, ಇನ್ನೋರ್ವ ನೇಪಾಳ ಮೂಲದ ಪ್ರದೀಪ್ (25) ಗಾಯಗೊಂಡಿದ್ದಾನೆ. ಇಬ್ಬರಿಗೆ ಒರಿಸ್ಸಾ ಮೂಲದ ತಾಹಿರ್ ಎಂಬಾತ ಚೂರಿಯಿಂದ ಶನಿವಾರ ಬೆಳಿಗ್ಗೆ ಇರಿದು ಪರಾರಿಯಾಗಿದ್ದಾನೆ.
ಘಟನೆ ವಿವರ: ಶಾಂತಿಬಾಗ್ ನಲ್ಲಿರುವ ನ್ಯೂ ತಾಜ್ ಹೊಟೇಲಿನಲ್ಲಿ ಕಾರ್ಮಿಕರಾಗಿದ್ದ ಎಲ್ಲರೂ ಅಲ್ಲೇ ಸಮೀಪದ ಖಾಸಗಿ ಲಾಡ್ಜಿನಲ್ಲಿ ಉಳಿದುಕೊಂಡಿದ್ದರು. ಶನಿವಾರ ನಸುಕಿನ ಜಾವ ತಾಹಿರ್ ಬೇಗನೇ ಎದ್ದು ಹೊಟೇಲಿಗೆ ಕೆಲಸಕ್ಕೆಂದು ತೆರಳಿದ್ದ. ಅಲ್ಲಿಂದ ವಾಪಸ್ಸಾಗಿದ್ದ ಈತ ರೂಮಿನಲ್ಲಿ ಮಲಗಿದ್ದ ನಿತೇಶ್ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ಇರಿದಿರುವುದಲ್ಲದೆ, ಸಮೀಪದಲ್ಲೇ ಮಲಗಿದ್ದ ಪ್ರದೀಪ್ ಎಂಬಾತನ ಕತ್ತಿಗೆ ಚೂರಿ ಇರಿಯಲು ಯತ್ನಿಸಿದಾಗ ತಪ್ಪಿ ಮುಖಕ್ಕೆ ಇರಿಯಲಾಗಿದೆ. ಲಾಡ್ಜಿನ ಮೇಲಿನ ಮಹಡಿಯಲ್ಲಿ ಬೆಳಗ್ಗಿನ ವೇಳೆ ಘಟನೆ ಸಂಭವಿಸಿದ್ದರಿಂದಾಗಿ ಕೃತ್ಯ ಯಾರ ಗಮನಕ್ಕೂ ಬಂದಿರಲಿಲ್ಲ. ತೀವ್ರ ರಕ್ತಸ್ರಾವವಾಗಿ ರೂಮಿನ ಹೊರಗೆ ಬಿದ್ದಿದ್ದ ನಿತೀಶ್ ನನ್ನು ಗಾಯಾಳು ಪ್ರದೀಪ್ ಹಾಗೂ ಇನ್ನೋರ್ವ ಕಾರ್ಮಿಕ ಅರ್ಧ ಗಂಟೆ ಬಳಿಕ ಕೆಳಗೆ ತಂದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿತೇಶ್ ಕುತ್ತಿಗೆ ಭಾಗ ಸಂಪೂರ್ಣ ಇರಿದಿರುವುದರಿಂದ ವಿಪರೀತ ರಕ್ತಸ್ರಾವವಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.
ಸ್ಥಳಕ್ಕೆ ಎಸಿಪಿ ಶೃತಿ, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾರಣವಿಲ್ಲದೆ ಇಬ್ಬರು ಕಾರ್ಮಿಕರಿಗೆ ಆರೋಪಿ ತಾಹಿರ್ ಚೂರಿಯಿಂದ ಇರಿದಿರುವ ಕುರಿತು ತನಿಖೆ ಆರಂಭಿಸಿದ್ದಾರೆ.












