ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ರಾಜ್ಯ ಸಚಿವ ಯು.ಟಿ.ಖಾದರ್ ರವರ ಸಹೋದರ ಯು.ಟಿ.ಇಫ್ತಿಕಾರ್ ಆಲಿಯವರು ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಳ್ಳುವ ಕುರಿತಂತೆ ಚಿಂತನೆ ನಡೆಸುತ್ತಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ಜಾತ್ಯಾತೀತ ನಿಲುವು ಮತ್ತು ದೇಶದೆಲ್ಲೆಡೆ ಬಿಜೆಪಿಗೆ ವ್ಯಕ್ತವಾಗುತ್ತಿರುವ ಒಲವುಗಳನ್ನು ಮನಗಂಡು ಸ್ವತ: ರಾಜಕೀಯ ಮಹತ್ವಾಕಾಂಕ್ಷಿಯೂ ಆಗಿರುವ ಇಫ್ತಿಕಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರ ಆಪ್ತವಲಯಗಳು ತಿಳಿಸಿವೆ.
ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಇಫ್ತಿಕಾರ್ ರಂತಹ ಮುಸ್ಲಿಂ ಯುವ ನಾಯಕರ ಅಗತ್ಯವೂ ಬಹಳಷ್ಟಿದೆ ಎಂಬುದನ್ನು ಅಲ್ಲಿನ ಹಿರಿಯರು ಒಪ್ಪಿಕೊಳ್ಳುತ್ತಿದ್ದಾರೆ.
ಇಫ್ತಿಕಾರ್ ಆಲಿ ಬಿಜೆಪಿಗೆ ಸೇರ್ಪಡೆಗೊಂಡದ್ದೇ ಆದಲ್ಲಿ ಅವರನ್ನು ಬೆಂಗಳೂರಿನ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕೂಡಾ ಬಿಜೆಪಿ ಮುಖಂಡರು ನಿರ್ಧರಿಸಿದಂತಿದೆ. ಕಾಂಗ್ರೆಸ್ ಶಾಸಕ ಹ್ಯಾರಿಸ್ ಪ್ರತಿನಿಧಿಸುತ್ತಿರುವ ಶಾಂತಿನಗರದಿಂದಲೇ ಇಫ್ತಿಕಾರ್ ರವರಿಗೆ ಸ್ಪರ್ಧಿಸಲು ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ.
ಇಫ್ತಿಕಾರ್ ಬಿಜೆಪಿ ಸೇರ್ಪಡೆ ಕುರಿತಂತೆ ದ.ಕ ಜಿಲ್ಲಾ ಬಿಜೆಪಿ ಘಟಕಕ್ಕೆ ಯಾವುದೇ ಮಾಹಿತಿ ಇದ್ದಂತಿಲ್ಲ. ಆದರೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಈ ಕುರಿತು ನಿರಂತರ ಮಾತುಕತೆಗಳಾಗುತ್ತಿದೆ. ಅಲ್ಲಿಯೇ ಇರುವ ಆರ್ ಎಸ್ ಎಸ್ ನ ರಾಜ್ಯ ಪ್ರಧಾನ ಕಚೇರಿ ಚಾಮರಾಜನಗರದಲ್ಲಿರುವ ಕೇಶವ ಕೃಪದ ಪ್ರಮುಖರಿಗೂ ವಿಷಯ ತಿಳಿದಂತಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರೊಂದಿಗೆ ಇಫ್ತಿಕಾರ್ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಮತ್ತೋರ್ವ ಹಿರಿಯ ಮುಖಂಡ ಈಶ್ವರಪ್ಪನವರು ಇಫ್ತಿಕಾರ್ ರವರೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದಾರೆ. ಬೆಂಗಳೂರಿನ ಬಿಜೆಪಿ ಶಾಸಕರುಗಳ ಪೈಕಿ ` ಪ್ರಭಾವಿ’ ಎಂದೇ ಪರಿಗಣಿಸಲ್ಪಟ್ಟಿರುವ ಶಾಸಕ ಅಶ್ವಥ್ ನಾರಾಯಣ ಕೂಡ ಇಪ್ತಿಕಾರ್ ಅವರೊಂದಿಗೆ ಈ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಸ್ವತ: ಇಫ್ತಿಕಾರ್ ಅವರೇ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಆರ್ ಎಸ್ ಎಸ್ ನ ಪ್ರಭಾವಿ ಮುಖಂರೊಬ್ಬರಲ್ಲಾದ ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ಸಹಿತ ಬಿಜೆಪಿಯ ಹಲವು ಪ್ರಭಾವಿ ಮುಖಂಡರೊಂದಿಗೆ ಇಫ್ತಿಕಾರ್ ರವರಿಗೆ ಸೌಹಾರ್ದ ಸಂಬಂಧವಿದೆ.
ಕುಟುಂಬಕ್ಕೂ ಗೊತ್ತಿದೆ:
ಇಪ್ತಿಕಾರ್ ಆಲಿ ಬಿಜೆಪಿ ಸೇರುವ ಚಿಂತನೆ ನಡೆಸಿರುವುದು ಅವರ ಸಹೋದರ ಸಚಿವ ಯು.ಟಿ.ಖಾದರ್ ರವರ ಗಮನಕ್ಕೂ ಬಂದಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದೆ ಸ್ವತ: ಇಫ್ತಿಕಾರ್ ರವರು ತನ್ನ ರಾಜಕೀಯ ನಿಲುವುಗಳ ಕುರಿತಂತೆ ಖಾದರ್ ಬಳಿ ಚರ್ಚೆ ನಡೆಸಿದ್ದರು.
ಆದರೆ ಈ ವೇಳೆ ಸಚಿವ ಖಾದರ್ ಯಾವ ರೀತಿಯ ನೇರ ಪ್ರತಿಕ್ರಿಯೆ ನೀಡದೆ ನಿರ್ಲಿಪ್ತರಾಗಿದ್ದರು. ಇಫ್ತಿಕಾರ್ ನಿರ್ಧಾರದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಮೂಲಗಳು ಹೇಳಿವೆ.
ಸಜ್ಜನ ರಾಜಕಾರಣಿ ಎಂದೇ ಹೆಸರು ಗಳಿಸಿದ್ದ ದಿ| ಯು.ಟಿ.ಫರೀದ್ ರವರ ಪುತ್ರ ಇಫ್ತಿಕಾರ್ , ತನ್ನ ಸಹೋದರ ಖಾದರ್ ರವರ ಚುನಾವಣೆ ವೇಳೆ ಮಾಸ್ಟರ್ ಮೈಂಡ್ ಆಗಿ ಕಾರ್ಯ ನಿರ್ವಹಿಸದವರೂ ಹೌದು.
ಪ್ರತಿಷ್ಠಿತ ರಾಜೀವ್ ಗಾಂಧಿ ಯುನಿವರ್ಸಿಟಿಸಿಯ ಸೆನೆಟ್ ಸದಸ್ಯನಾಗಿರುವ ಇಫ್ತಿಕಾರ್ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಎಂ.ವಿ ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿ, ಫಿಸಿಯೋಥೆರಪಿ ಅಸೋಸಿಯೇಶನ್ ನ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಮುಖ ಪದಾಧಿಕಾರಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಇಫ್ತಿಕಾರ್ ತಮ್ಮನ್ನು ಗುರುತಿಸಿಕೊಂಡವರು ಹಲವು ಗೌರವಗಳಿಗೂ ಅವರು ಪಾತ್ರರಾದವರು.
ಸದಾ ವರ್ಣರಂಜಿತ ವ್ಯಕ್ತಿತ್ವ ಕಾಯ್ದುಕೊಂಡಿರುವ ಇಫ್ತಿಕಾರ್ ರವರಿಗೆ ದೇಶ ವಿದೇಶಗಳ ` ಹೈಪ್ರೊಫೈಲ್ ವ್ಯಕ್ತಿಗಳೊಂದಿಗೆ ನೇರ ಸಂಪರ್ಕವಿದೆ. ಆದರೆ ಸಾರ್ವಜನಿಕ ಜೀವನದಲ್ಲಿನ ತನ್ನ ಸರಳತೆಯಿಂದಾಗಿ ಅವರಿಗೆ ಪಕ್ಷಾತೀತವಾಗಿ ಸ್ನೇಹಿತರಿದ್ದಾರೆ.
( ಕೃಪೆ ; ನ್ಯೂ ಮಂಗಳೂರು ಟೈಮ್ಸ್ )


