ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮುಡಿಪು: ಉಪಚುನಾವಣೆಯಲ್ಲಿ ಬಿಜೆಪಿಯು ಇಲ್ಲಸಲ್ಲದ ಅಪಪ್ರಚಾರ ಮಾಡಿದರೂ ಸಿದ್ದರಾಮಯ್ಯರವರ ಅಭಿವೃದ್ದಿ ಪರ ಆಡಳಿತದ ಫಲವಾಗಿ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದ್ದು ಇದು ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ ಅವರು ಹೇಳಿದರು.
ಅವರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿಯಾದ ಹಿನ್ನೆಲೆಯಲ್ಲಿ ಮುಡಿಪುವಿನಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೇ ಯಾವುತ್ತೂ ಕಾರ್ಯಕರ್ತರೇ ಶಕ್ತಿಯಾಗಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರು ಅಧಿಕಾರದ ದಾಹದಿಂದ ಬಿಜೆಪಿಗೆ ಸೇರ್ಪಡೆಗೊಂಡರೂ ಅಲ್ಲಿಯ ಕಾರ್ಯಕರ್ತರು ಕಾಂಗ್ರೆಸ್‍ನ ಕೈಯನ್ನು ಬಿಡದೆ ಮತ್ತಷ್ಟು ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಮಾತನಾಡಿ, ರಾಜ್ಯ ಮುಖ್ಯಮಂತ್ರಿಯವರ ಅನ್ನಭಾಗ್ಯ, ಕ್ಷೀರ ಭಾಗ್ಯ ಮುಂತಾದ ಜನಪರವಾದ ಆಡಳಿತಕ್ಕೆ ಜನರು ಇಂದು ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿದ್ದಾರೆ. ಮುಂದೆ ನಡೆಯುವ ರಾಜ್ಯದ ಚುನಾವಣೆಯಲ್ಲೂ ರಾಜ್ಯದೆಲ್ಲೆಡೆ ಇದೇ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರ್ನಾಡು ಪಂಚಾಯಿತಿ ಮಾಜಿ ಅಧ್ಯಕ್ಷ ದೇವಾದಾಸ್ ಭಂಡಾರಿ, ಪಜೀರು ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ, ಬಶೀರ್ ಅಹ್ಮದ್, ಅಬ್ದುಲ್ ಖಾದರ್, ನಾಸೀರ್ ನಡುಪದವು, ಸಮೀರ್ ಪಜೀರ್, ಅಬ್ದುಲ್ ರಹಿಮಾನ್, ಶರೀಫ್ ಚೆಂಬೆತೋಟ, ಯಾಕೂಬ್, ಕೆ.ಎಚ್.ಮಹಮ್ಮದ್, ಬಶೀರ್ ಮೊದಲಾದವರು ಉಪಸ್ಥಿತರಿದ್ದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ.ಸದಸ್ಯ ಹೈದರ್ ಕೈರಂಗಳ ವಂದಿಸಿದರು.
ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮುಡಿಪು ಪೇಟೆಯಲ್ಲಿ ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು.













