ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಹಲವು ದೇಶಗಳನ್ನು ಸುತ್ತಿ ದೇಶಕ್ಕೆ ಸಂವಿಧಾನವನ್ನು ರಚಿಸಿದ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರನ್ನು ನೆನಪಿಸುವ ಕಾರ್ಯ ಮಹತ್ತರವಾದುದು, ಈ ಮೂಲಕ ಎಲ್ಲರೂ ಒಂದೇ ಅನ್ನುವ ಭಾವನೆ ಮೂಡಬೇಕಿದೆ ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ತೊಕ್ಕೊಟ್ಟು ಕಾಪಿಕಾಡಿನ ಗಾಂಧಿನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ಶತಾಬ್ದಿ ವರ್ಷಾಚರಣೆ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಸೀರೆ ಮತ್ತು ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿದರು.
ದೇಶದಲ್ಲಿ ಇಸ್ಲಾಂ ಧರ್ಮ ವ್ಯಾಪಿಸಿದ ನಂತರ ಹಿಂದು ಧರ್ಮದ ತತ್ವ, ಸಿದ್ಧಾಂತಗಳು ಹುಟ್ಟಿಕೊಂಡಿತ್ತು. ಆದರೆ ಅದರಲ್ಲಿ ನಿರ್ದಿಷ್ಟ ಸಮುದಾಯದವರು ಸಮಾಜದ ಮುಖ್ಯವಾಹಿನಿಯಲ್ಲಿ ಬಹಳ ಹಿಂದೆ ಬಿದ್ದಿದ್ದರು. ಆದರೆ ಸದ್ಯ ಶಿಕ್ಷಣ ಪಡೆದು ಶಿಕ್ಷಿತರಾದಂತೆ ಹಿಂದುಳಿದವರೆನ್ನುವ ಬೇಧವವನ್ನು ಇಟ್ಟುಕೊಳ್ಳದೆ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ ಪರಿಶಿಷ್ಟ ಸಮುದಾಯದಲ್ಲಿ ಉತ್ತನ ಹುದ್ದೆಗಳನ್ನು ಸ್ವೀಕರಿಸಿದವರಿದ್ದಾರೆ, ಪ್ರತಿಭಾವಂತರಿದ್ದಾರೆ. ಈ ಮೂಲಕ ಸಮಾಜದ ಏಳಿಗೆಯಲ್ಲಿ ಅವರು ಶ್ರಮವಹಿಸಿ ದುಡಿಯುತ್ತಿದ್ದಾರೆ. ಸರಕಾರಗಳು ವಿವಿಧ ಯೋಜನೆಗಳನ್ನು ರೂಪಿಸಿದ್ದು, ಅದರ ಸದುಪಯೋಗಪವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕಾಗಿದೆ ಎಂದರು
ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಿಲ್ಲಾ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮಾತನಾಡಿ ಕೇಂದ್ರ ಸರಕಾರ ಅಂಬೇಡ್ಕರ್ ಫೌಂಡೇಶನನ್ನು ಸ್ಥಾಪಿಸುವ ಮೂಲಕ ಪರಿಶಿಷ್ಟ ಸಮುದಾಯದವರಿಗೆ ಆರೋಗ್ಯಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಪೂರೈಸಲು ಬದ್ಧವಾಗಿದೆ. ಅಲ್ಲದೆ ಅಂಬೇಡ್ಕರ್ ಅವರಿಗೆ ವಿಶಿಷ್ಟ ಗೌರವವನ್ನು ನೀಡುವ ಮೂಲಕ ಅವರ ಹೆಸರಿನಲ್ಲೇ ಭೀಮ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದ್ದು, ಈ ಮೂಲಕ ಸರಕಾರದ ವಿವಿಧ ಸವಲತ್ತುಗಳನ್ನು ಪಡೆಯಬಹುದಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕ್ಷೇತ್ರ ಉಪಾಧ್ಯಕ್ಷ ಪ್ರಕಾಶ್ ಸಿಂಫೋನಿ, ಎಸ್ ಸಿ ಮೋರ್ಚಾದ ಕ್ಷೇತ್ರ ಅಧ್ಯಕ್ಷ ವಿಠಲ ಸಾಲ್ಯಾನ್, ಕುಮಾರ್ ಯು.ಕೆ, ದ.ಸಂ.ಸ ದ ರಾಜ್ಯ ಸಂಚಾಲಕ ಗಿರೀಶ್ ಗಾಂಧಿನಗರ, ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ಗಾಂಧಿನಗರ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷ ಯು.ಕೆ.ಬಾಬು, ಗುರಿಕಾರರಾದ ಶೀನಪ್ಪ, ಚಂದ್ರಹಾಸ್ ಗುಂಡ್ಯ, ಮೋಹನ್ ಬಲ್ಯಾ, ಕೋಟೆಕಾರು ಪಂಚಾಯಿತಿ ಸದಸ್ಯ ಅಣ್ಣು ಕೊಂಡಾಣ ಮುಖ್ಯ ಅತಿಥಿಗಳಾಗಿದ್ದರು. ಮನೋಜ್ ಆಚಾರ್ಯ ಸ್ವಾಗತಿಸಿದರು. ರೋಷೆಲ್ ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ್ ಕಾಪಿಕಾಡ್ ವಂದಿಸಿದರು.
















