ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಪರಿಶಿಷ್ಟ ಸಮುದಾಯದವರು ಸ್ವಾವಲಂಬಿಯಾಗಿ ಬದುಕಲು ಮತ್ತು ತಮ್ಮ ಹಕ್ಕುಗಳನ್ನು ಪಡೆಯುವ ಸಲುವಾಗಿ ಬಿಜೆಪಿ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಇದಾಗಿದೆ ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು.
ಅವರು ಪಂಡಿತ್ ದೀನ್ ದಯಾಳ್ ಉಪಾಧ್ಯಯರ ಜನ್ಮಶತಾಬ್ಧಿ ವರ್ಷಾಚರಣೆ ಪ್ರಯುಕ್ತ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಮಹಿಳಾ ಮೋರ್ಚಾ ಮತ್ತು ಮುನ್ನೂರು ಗ್ರಾಮ ಸಮಿತಿಯ ಜಂಟಿ ಆಶ್ರಯದಲ್ಲಿ ಮುನ್ನೂರು ಗ್ರಾಮದ ಮಾಯಿಲ ಎಂಬವರ ಮನೆ ಎದುರುಗಡೆ ಬುಧವಾರ ಹಮ್ಮಿಕೊಂಡಿದ್ದ ಪರಿಶಿಷ್ಠ ಜಾತಿ ಪಂಗಡದ ಕುಟುಂಬಗಳಿಗೆ ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಮತ್ತು ಬಿಸು ಆಚರಣೆ, ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಶಿಕ್ಷಣ ಪಡೆದವರು ಹಿಂದುಳಿಯಲು ಸಾಧ್ಯವಿಲ್ಲ. ಹಿಂದುಳಿದವರು ಅನ್ನುವ ಪ್ರಮೇಯವೇ ಸಮಾಜದಲ್ಲಿ ಇರದಂತೆ, ಎಲ್ಲರೂ ಹಿಂದು ಸಮುದಾಯದವರಾಗಿ ಬಾಳುವಂತ ವಾತಾವರಣ ನಿರ್ಮಾನ ಆಗಬೇಕಿದೆ. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಅರಿವಿನ ಜತೆಗೆ ಅವರ ವ್ಯವಸ್ಥೆ, ಹಕ್ಕು, ಜವಾಬ್ದಾರಿಯ ತಿಳುವಳಿಕೆಯ ಉದ್ದೇಶದಿಂದ ನಡೆಯುವ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ ವಿವಿಧ ಸವಲತ್ತುಗಳ ಪರಿಚಯ ಜನರಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ವಹಿಸಿ ಮಾತನಾಡಿ ಹಿಂದೆ ಹೋರಾಟದ ಮೂಲಕ ಸವಲತ್ತುಗಳನ್ನು ಪಡೆಯುವಂತಹ ವ್ಯವಸ್ಥೆ ಇತ್ತು. ಸದ್ಯ ಎಲ್ಲರೂ ಸುಶಿಕ್ಷಿತರಾಗಿರುವುದರಿಂದ ಅವರ ಹಕ್ಕುಗಳನ್ನು ಕೇಳಿ ಪಡೆಯುವಂತಹ ಸ್ಥಿತಿಯಲ್ಲಿದ್ದಾರೆ. ಇಂತಹ ಕಾರ್ಯಕ್ರಮ ಮುನ್ನೂರು ಗ್ರಾಮದಲ್ಲಿ ಮಾತ್ರ ಸೀಮಿತವಾಗಿರದೆ ಜಿಲ್ಲೆಯಾದ್ಯಂತ ವ್ಯಾಪಿಸಲಿ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ಮಹಿಳಾ ಮೋರ್ಚಾದ ರಮಣಿ, ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಭಂಡಾರಮನೆ, ರಾಜೇಶ್ ಗಟ್ಟಿ ಮುಂಡೋಳಿ, ಬಿಜೆಪಿ ಮಹಿಳಾ ಕ್ಷೇತ್ರ ಕಾರ್ಯದರ್ಶಿ ಲಲಿತಾ ಸುಂದರ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ಜಾನಪದ ಕ್ಷೇತ್ರದಲ್ಲಿ ಸಾಧನೆಗೈದ ಮಾಯಿಲ ಮತ್ತು ತಿಮ್ಮಕ್ಕ ಎಂಬವರನ್ನು ಅಭಿನಂಧಿಸಲಾಯಿತು.






























