ಉಳ್ಳಾಲ ನ್ಯೂಸ್ ನೆಟ್ ವರ್ಕ್
ಅಸೈಗೋಳಿ: ಸರಕಾರ ಚಾಲಕರಿಗಾಗಿಯೇ ಕಾಯಿದೆ, ಕಾನೂನು, ಸವಲತ್ತುಗಳನ್ನು ಜಾರಿಗೊಳಿಸಿದರೂ ಅದು ಅವರಿಗೆ ತಲುಪುತ್ತಿಲ್ಲ, ಅದನ್ನು ತಲುಪಿಸುವ ನಿಟ್ಟಿನಲ್ಲಿ ತುಳುನಾಡು ರಕ್ಷಣಾ ವೇದಿಕೆ ವಿವಿಧ ಕಾರ್ಯಕ್ರಮಗಳೊಂದಿಗೆ ಕಾರ್ಯಾಚರಿಸುತ್ತಿದೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದ್ದಾರೆ.
ಅವರು ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ವಿಧಾನಸಭಾ ಕ್ಷೇತ್ರ ಘಟಕ ವತಿಯಿಂದ ಖಾಸಗಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಬಸ್ ಚಾಲಕರಿಗಾಗಿ ಹಮ್ಮಿಕೊಂಡಿದ್ದ ಖಾಸಗೀ ವಾಣಿಜ್ಯ ವಾಹನ ಚಾಲಕರ ವಿಮಾ ಯೋಜನೆಯ 5 ನೇ ಹಂತದ ನೋಂದಾವಣೆ ಕಾರ್ಯಕ್ರಮಕ್ಕೆ ಅಸೈಗೋಳಿ ಯುವಕ ಮಂಡಲದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
7 ದಿನದ ಸಪ್ತಾಹದ ಮೂಲಕ 2 ಲಕ್ಷ ರೂ. ವಿಮಾ ನೋಂದಣಿಯನ್ನು ವೇದಿಕೆ ಹಮ್ಮಿಕೊಂಡಿದೆ. ಚಾಲಕರಿಗೆ ದಿನದ ದುಡಿಮೆ ಕಡಿತಗೊಳಿಸಿ ನೋಂದಾಯಿಸಲು ಕಷ್ಟ ಸಾಧ್ಯ, ಅದಕ್ಕಾಗಿ ವೇದಿಕೆ ಚಾಲಕರು ಇರುವ ಸ್ಥಳಕ್ಕೆ ತೆರಳಿ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಚಾಲಕರು ಎಲ್ಲಾ ರೀತಿಯಲ್ಲೂ ಆರೋಗ್ಯಯುತವಾದಲ್ಲಿ, ಅವರ ಸಂಸಾರದ ಜತೆಗೆ ಪ್ರಯಾಣಿಕರ ಪ್ರಯಾಣವೂ ಸುಖಕರವಾಗಿರುವುದು.
ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ಆಗಲಿ ತುಳುನಾಡಿನ ಬಹಳಷ್ಟು ಹೋರಾಟಗಾರರ ಸ್ಮರಣೆಯಾಗಲಿ, ಗೌರವವಾಗಲಿ ಸಿಗುತ್ತಿಲ್ಲ. ಪಠ್ಯ ಪುಸ್ತಕಗಳಲ್ಲೇ ವರ್ಣಗಳೇ ಇಲ್ಲ, ತುಳುವಿಗರಿಗೆ ಗೌರವೇ ಸಿಗುತ್ತಿಲ್ಲ. ತುಳುನಾಡಿನ ಜನರ ಧ್ವನಿಯೇ ಕಡಿಮೆಯಾಗಿರುವುದರಿಂದ ಕಂಬಳ ನಿಷೇಧ , ನೇತ್ರಾವತಿ ನದಿ ತಿರುವು, ಕೃಷಿ ಪ್ರಧಾನ ಜಾಗಗಳು ಬಹುರಾಷ್ಟ್ರೀಯ ಕಂಪೆನಿಗಳ ಯೋಜನೆಗಳಿಗೆ ತುಳುನಾಡು ಬಲಿಯಾಗುತ್ತಿದೆ. ಇದರ ವಿರುದ್ಧ ದನಿ ಎತ್ತುವ ಸಲುವಾಗಿಯೇ ವೇದಿಕೆ ಎದ್ದು ನಿಂತಿದೆ ಎಂದರು. ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ ವಿವಿಧ ಸವಲತ್ತುಗಳ ಪರಿಚಯ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತು.ರ.ವೇ ಮಂಗಳೂರು ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಸಿರಾಜ್ ಅಡ್ಕರೆ ಮಾತನಾಡಿ ಸಮಾಜಮುಖಿ ಕಾರ್ಯಕ್ರಮಗಳ ಜತೆಗೆ ಜಾತ್ಯಾತೀತವಾಗಿ ಜನರ ಸಮಸ್ಯೆಗಳಿಗೆ ನಿರಂತರ ಒಂಭತ್ತು ವರ್ಷಗಳಿಂದ ವೇದಿಕೆ ಸ್ಪಂಧಿಸುತ್ತಾ ಬಂದಿದೆ. ಹಿಂಸಾತ್ಮಕ ಸಂಘಟನೆಗಳಿಂದ ಜನರ ದಿಕ್ಕು ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದೆ. ಈ ನಡುವೆ ತು.ರ.ವೇ ಶಾಂತಿಯುತವಾಗಿ ಜನರ ಹಿತವನ್ನು ಬಯಸುತ್ತಾ ಸಮಾಜಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.
ಈ ಸಂದರ್ಭ ತು.ರ.ವೇ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಮಹಿಳಾ ಘಟಕದ ಜ್ಯೋತಿಕಾ ಜೈನ್, ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು, ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುತ್ತಾರ್ , ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಘಟಕದ ಅಧ್ಯಕ್ಷ ಅರುಣ್ ಡಿಸೋಜಾ ಅಸೈಗೋಳಿ, ಮಹಿಳಾ ಘಟಕದ ಅಧ್ಯಕ್ಷ ವಿದ್ಯಾ, ಯು.ಜೋಗಿ, ಕೊಣಾಜೆ ಘಟಕದ ಅಧ್ಯಕ್ಷ ಮುಹಮ್ಮದ್ ನಿಯಾಝ್ , ರಾಜು ಮಾಸ್ಟರ್ ಉಪಸ್ಥಿತರಿದ್ದರು.


