ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ದೇಶದ ಸ್ವಚ್ಛತೆಯನ್ನು ಮನದಲ್ಲಿಟ್ಟುಕೊಂಡು ಪ್ರತಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಚ್ಛತಾ ಚಳವಳಿಯನ್ನು ಆರಂಭಿಸಲು ಮುಂದಾಗಿದ್ದು, ಬಹುತೇಕ ಹಿರಿಯ ನಾಗರಿಕರನ್ನೇ ಬಳಸಿಕೊಂಡು ಅವರ ನಾಯಕತ್ವದಲ್ಲಿ ಚಳವಳಿ ಮುಂದುವರಿಯಲಿದೆ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಅಭಿಪ್ರಾಯಪಟ್ಟರು.ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು ಇದರ ಮಾರ್ಗದರ್ಶನದಲ್ಲಿ ಅಂಬಿಕಾರೋಡ್ ಗಟ್ಟಿ ಸಮಾಜ ಭವನ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲೇ ಮಂಗಳೂರು ನಗರ ವಾಸಿಸಲು ಉತ್ತಮವಾದ ಸ್ಥಳ ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದು ವರದಿ ನೀಡಿದೆ. ಅದರಲ್ಲೂ ಶ್ರೀ ಕ್ಷೇತ್ರ ಧರ್ಮಸ್ಥಳ ದೇಶದಲ್ಲೇ ಸ್ವಚ್ಛ ಗ್ರಾಮ ಎಂಬ ಸ್ಥಾನವನ್ನು ಗಳಿಸಿದೆ. ಇದು ಖಾವಂದರ ಅವಿರತ ಶ್ರಮದಿಂದ ಸಾಧ್ಯವಾಗಿದೆ. ಕ್ಷೇತ್ರದಲ್ಲಿ ರೂ.8 ಕೋಟಿ ವೆಚ್ಚದಲ್ಲಿ ನೀರಿನ ಪುನರ್ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ಸಮಾಜಕ್ಕೆ ಉಪದೇಶ ನೀಡುವ ಮುನ್ನ ಬದಲಾವಣೆ ನಮ್ಮ ಮನೆಗಳಲ್ಲಿ ಆಗಬೇಕಿದೆ. ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಖಾವಂದರ ಕಾರ್ಯವೈಖರಿ ಉದಾಹರಣೆಯಾಗಿದೆ. 2002 ರಲ್ಲಿ ಮನೆಗಳ ಕಸವನ್ನು ಅಲ್ಲೇ ವಿಂಗಡಿಸಿ ಸಂಸ್ಕರಣೆ ನಡೆಸುವ ವಿಧಾನವನ್ನು ಅನುಸರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಇದರ ಸಂಪೂರ್ಣ ಜವಾಬ್ದಾರಿಯನ್ನು ನಗರಸಭೆಗಳು ವಹಿಸಬೇಕಿತ್ತು. ಆದರೆ ಸದ್ಯ ಆದೇಶದ ಪಾಲನೆಯಾಗದೆ, ಕಸ ವಿಲೇವಾರಿಗೂ ಸ್ಥಳವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪುಗಳು ಕಾರ್ಯಾಚರಿಸುತ್ತಿದ್ದು, ರಾಜ್ಯದ ಪ್ರತಿ ಧಾರ್ಮಿಕ ಕೇಂದ್ರಗಳ ಶುಚಿತ್ವದಲ್ಲಿ ತೊಡಗಿಸಿಕೊಂಡು 8,565 ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರ ಧಾರ್ಮಿಕ ಕೇಂದ್ರಗಳನ್ನು ಒಟ್ಟು 3,60,000 ಸ್ವಸಹಾಯ ಸಂಘದ 7ಲಕ್ಷದ 15ಸಾವಿರ ಸದಸ್ಯರನ್ನು ಸೇರಿಸಿಕೊಂಡು ನಡೆಸಲಾಗಿದೆ. ಕಳೆದ 15 ವರ್ಷದಿಂದ ಒಟ್ಟು 10 ಸಾವಿರ ಶೌಚಾಲಯಗಳನ್ನು ಸ್ವಸಹಾಯ ಸಂಘಗಳಿಂದ ನಿರ್ಮಿಸಲಾಗಿದೆ. ಪ್ರತಿಯೊಬ್ಬರು ಕೇಂದ್ರ ಸರಕಾರದ ಜನ್ ಧನ್ ಯೋಜನೆಯನ್ನು ಸರ್ಮಪಕವಾಗಿ ಉಪಯೋಗಿಸಿಕೊಳ್ಳುಬೇಕು. ಬ್ಯಾಂಕ್ ಅಥವಾ ಸ್ವಸಹಾಯ ಸಂಘದಿಂದ ಲಕ್ಷ ಸಾಲ ಪಡೆಯುವ ಮುನ್ನ ಲಕ್ಷ ಭಾರಿ ಯೋಚಿಸಿ ಸಾಲ ಪಡೆಯಬೇಕಿದೆ. ಸಾಲದ ಜಮಾವಣೆ, ಪಡೆದ ಸಾಲದಿಂದ ಉತ್ದಾದನೆ ಕುರಿತ ಅರಿವು ಅಗತ್ಯ ಎಂದರು.
ಈ ವೇಳೆ ಸುರತ್ಕಲ್ ವಲಯದ ಉರ್ಮಿಳಾ ಎಂಬವರ ಮೂರು ಅಂಗವಿಕಲ ಮಕ್ಕಳಿಗೆ ಮಾಶಾಸನ, ಬೆಂಕಿ ಅನಾಹುತಕ್ಕೀಡಾದ ಮನೆ ಮಾಲಕಿ ಉಳ್ಳಾಲದ ವಸಂತಿ ಎಂಬವರಿಗೆ 10 ಸಾವಿರ ಅನುದಾನ, ಕೋಡಿಕಲ್ ಕುರು ಅಂಬಾದೇವಸ್ಥಾನಕ್ಕೆ 1 ಲಕ್ಷ ಅನುದಾನ, ನೀರುಮಾರ್ಗ ಮಹಿಳಾ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಮಂಜೂರಿಯಾಗಿರುವ 1ಲಕ್ಷ ಅನುದಾನದಲ್ಲಿ ಮೊದಲ ಕಂತಿನ 60ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಸೋಮೇಶ್ವರದ ಆಡಳಿತ ಮೊಕ್ತೇಸರ ವಿಶ್ವನಾಥ ಗಟ್ಟಿ ವಗ್ಗ ವಹಿಸಿದ್ದರು. ಉಳ್ಳಾಲ ನಗರಸಭೆ ಅಧ್ಯಕ್ಷ ಕೆ.ಹುಸೇನ್ ಕುಂಞಮೋನು, ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ನೆಲ್ಯಾಡಿ, ಮಂಗಳೂರು ಕೇಂದ್ರ ಒಕ್ಕೂಟದ ಅಧ್ಯಕ್ಷ ಮಾಧವ ಕನ್ನಗುಡ್ಡೆ, ಮಂಗಳೂರು ಕೇಂದ್ರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್ , ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚಂದ್ರಮೋಹಿನಿ, ಕೃಷಿ ಅಧಿಕಾರಿ ದಿನೇಶ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೊಣಾಜೆ ವಲಯದ ಮೇಲ್ವಿಚಾರಕಿ ರೇಷ್ಮಾ ವಾರ್ಷಿಕ ವರದಿ ಮಂಡಿಸಿದರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಉವiರಬ್ಬ ಸ್ವಾಗತಿಸಿದರು, ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮ ನಿರೂಪಿಸಿದರು























