ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮುಡಿಪು: ಮಕ್ಕಳಲ್ಲಿ ತೆಗೆದುಕೊಳ್ಳುವ ಗುಣ ಕಳೆದು ಹೋಗಿದೆ, ಇಟ್ಟುಕೊಳ್ಳಲು ಆಗದಿರುವುದರಿಂದ ಅನುಭವಿಸಲು ಅವರಿಂದ ಅಸಾಧ್ಯವಾಗುತ್ತಿದ್ದು, ಅವರ ಸಾಮಥ್ರ್ಯದ ಲೂಟಿ ಆಗುತ್ತಿದೆ ಎಲ್ಲರೂ ಮಿತಿಯ ಒಳಗಡೆ ಬಂಧಿಯಾಗಿದ್ದಾರೆ ಎಂದು ಮಂಗಳೂರು ಸ್ವರೂಪ ಅಧ್ಯಯನ ಸಂಸ್ಥೆಯ ನಿರ್ದೇಶಕ ಗೋಪಾಡ್ಕರ್ ಆತಂಕ ವ್ಯಕ್ತಪಡಿಸಿದರು.
ಅವರು ನ್ಯೂಸ್ ಪಾಯಿಂಟ್ ಮುಡಿಪು, ಜನ ಶಿಕ್ಷಣ ಟ್ರಸ್ಟ್ ಮುಡಿಪು ಮತ್ತು ಚಿತ್ತಾರ ಬಳಗ ಮಂಗಳೂರು ಇವರ ಸಹಭಾಗಿತ್ವದೊಂದಿಗೆ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 2016-17ರ ಮಂಚಿ ಮಕ್ಕಳ ಕೊಲಾಜ್ ಚಿತ್ರ ಪಯಣದ ಸಂಪನ್ನ ಸಮಾರಂಭ ಮತ್ತು ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳು ಶಿಕ್ಷಣದ ಸಾಧ್ಯತೆಯ ಮಿತಿಯೊಳಗೆ ಉಳಿದುಕೊಂಡಿದ್ದಾರೆ. ಅವರನ್ನು ಕೆರಳಿಸಿ ಸಹಜವಾಗಿ ಅರಳಿಸುವ ರೀತಿಯಲ್ಲಿ ಕಾರ್ಯಗಳು ಆರಂಭವಾಗಬೇಕಿದೆ. ಸದ್ಯದ ಸ್ಥಿತಿಯಲ್ಲಿ ಮಕ್ಕಳ ಕಲಿಯುವ ಹಕ್ಕನ್ನು ಬೇರೆಯವರು ಇಟ್ಟುಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ದೇಹಕ್ಕೆ ಮತ್ತು ಮನಸ್ಸಿಗೆ ಶಿಕ್ಷೆಯಾಗುತ್ತಿದೆ ಎಂದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಸಿ, ನ್ಯೂಸ್ ಪಾಯಿಂಟ್ ಮಾಲೀಕ ವೆಂಕಟೇಶ್.ಹೆಚ್, ಕೊಳ್ನಾಡು ಮಂಚಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀರಾಮಮೂರ್ತಿ, ಆಕೃತಿ ಪ್ರಿಂಟರ್ಸ್‍ನ ಕಲ್ಲೂರು ನಾಗೇಶ್, ಚಿತ್ತಾರ ಬಳಗದ ಸಂಚಾಲಕ ಸತೀಶ್ ಇರಾ ಮುಖ್ಯ ಅತಿಥಿಗಳಾಗಿದ್ದರು.
ಕೊಲಾಜ್ ಚಿತ್ರ ಪಯಣದ ಪರಿಕಲ್ಪನೆಯ ತಾರನಾಥ್ ಕೈರಂಗಳ್ ಸ್ವಾಗತಿಸಿದರು. ಚಂದ್ರಶೇಖರ್ ಪಾತೂರು ಕಾರ್ಯಕ್ರಮ ನಿರೂಪಿಸಿದರು. ಚಿತ್ತಾರ ಬಳಗದ ಸಂತೋಷ್ ಶೆಟ್ಟಿ ವಂದಿಸಿದರು. ಒಂದು ವಾರಗಳ ಕಾಲ ಮಕ್ಕಳಿಗೆ ನಡೆಯಲಿರುವ ಕೊಲಾಜ್ ಚಿತ್ರಕಲಾ ಕಾರ್ಯಗಾರದಲ್ಲಿ ಬಂಟ್ವಾಳ ತಾಲೂಕಿನ 18 ಶಾಲೆಗಳ ಸುಮಾರು 200 ರಷ್ಟು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.























