ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಇಬ್ಬರ ತಂಡ ಯುವಕನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ಕೋಡಿ ಸಮೀಪದ ವೀರಭದ್ರ ದೇವಸ್ಥಾನ ಹಾಗೂ ರೆಹಮಾನಿಯಾ ಮಸೀದಿ ನಡುವೆ ಸೋಮವಾರ ತಡರಾತ್ರಿ ವೇಳೆ ಸಂಭವಿಸಿದೆ.
ಕೋಡಿ ನಿವಾಸಿ ನೌಷಾದ್ ಹುಸೈನ್ (23) ಕೊಲೆ ಯತ್ನಕ್ಕೊಳಗಾಗಿರುವ ಯುವಕ. ಮುಕ್ಕಚ್ಚೇರಿಯಲ್ಲಿರುವ ಸಮೋಸಾ ತಯಾರಿಕಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಷಾದ್ ಕೆಲಸಕ್ಕೆಂದು ತೆರಳುವ ಸಂದರ್ಭ ಘಟನೆ ನಡೆದಿದೆ. ಬೈಕಿನಲ್ಲಿ ತೆರಳುವ ಸಂದರ್ಭ ಎದುರಿನಿಂದ ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ನೌಷಾದ್ ಮೇಲೆ ತಲವಾರು ಬೀಸಿದ್ದರು. ತಲವಾರಿನ ಏಟಿನಿಂದ ತಪ್ಪಿಸುವ ಸಂದರ್ಭ ಕೈಯನ್ನು ಅಡ್ಡ ಹಿಡಿದಿದ್ದರಿಂದಾಗಿ ಕೈಗೆ ಕಡಿತದ ಗಾಯವಾಗಿದೆ. ತಪ್ಪಿಸುವ ಧಾವಂತದಲ್ಲಿ ಬೈಕ್ ರಸ್ತೆಗೆ ಉರುಳಿಬಿದ್ದಿದೆ. ಸದ್ದು ಕೇಳಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಪೊಲೀಸ್ ಪೇದೆಗಳಿಬ್ಬರು ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದಾಗ ಓರ್ವ ಆರೋಪಿ ಮೊಗವೀರಪಟ್ನ ಕಡೆಗೆ ಓಣಿಯ ಮೂಲಕ ಪರಾರಿಯಾದರೆ, ಇನ್ನೋರ್ವ ಆರೋಪಿ ಬೈಕ್ ಸಮೇತ ಪರಾರಿಯಾಗಿದ್ದಾನೆ. ಪೊಲೀಸರು ಬರುವಲ್ಲಿ ವಿಳಂಬವಾಗುತ್ತಿದ್ದರೂ ಆರೋಪಿಗಳು ನೌಷಾದ್ ಹುಸೈನ್ ಅವರನ್ನು ಕೊಲೆ ನಡೆಸುತ್ತಿದ್ದರು. ಇದನ್ನು ಮಂಗಳೂರಿನಿಂದ ಮುಕ್ಕಚ್ಚೇರಿ ಮನೆಗೆ ಕಾರಿನಲ್ಲಿ ತೆರಳುತ್ತಿದ್ದ ಫೈರೋಝ್ ಎಂಬವರು ಪ್ರತ್ಯಕ್ಷವಾಗಿ ಕಂಡಿದ್ದು, ಕಾರಿನಿಂದ ಅವರು ಇಳಿಯುವಷ್ಟರಲ್ಲಿ ಇಬ್ಬರು ಆರೋಪಿಗಳು ಅದಾಗಲೇ ಪರಾರಿಯಾಗಿದ್ದರು.
ಎರಡು ದಿನಗಳ ಹಿಂದಷ್ಟೇ ಬಿಡುಗಡೆಗೊಂಡವರ ಕೃತ್ಯ:
2016ರ ಎ.12 ರಂದು ಉಳ್ಳಾಲ ಮೊಗವೀರಪಟ್ನದಲ್ಲಿ ಮೀನುಗಾರ ರಾಜು ಕೋಟ್ಯಾನ್ ಎಂಬವರ ಹತ್ಯೆ ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ ಉಳ್ಳಾಲದಲ್ಲಿ ಇಬ್ರಾಹಿಂ ನಸ್ಫಾನ್ ಎಂಬಾತನ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಲಾಗಿತ್ತು, ಈ ಪ್ರಕರಣ ಸಂಬಂಧ ಮೊಗವೀರಪಟ್ನದ ರಮಿತ್ ಮತ್ತು ಉಳ್ಳಾಲ ಹೊರವಲಯದ ಪ್ರಜ್ವಲ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದರು. ಮಾ.25 ರಂದು ಇಬ್ಬರೂ ಬಿಡುಗಡೆಗೊಂಡಿದ್ದರು. ನಿನ್ನೆ ಮತ್ತೆ ಇಬ್ಬರು ನೌಷಾದ್ ಹುಸೈನ್ ಹತ್ಯೆಗೆ ಸಂಚು ರೂಪಿಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ. ಇಬ್ಬರ ಕುರಿತು ನೌಷಾದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಬಿಗಿ ಬಂದೋಬಸ್ತ್ : ಘಟನೆಯಿಂದ ಉಳ್ಳಾಲದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಗಾಯಾಳು ಉಳ್ಳಾಲದ ಸರೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಗೆ ಪೊಲೀಸ್ ಕಮೀಷನರ್ ಚಂದ್ರಶೇಖರ್, ಡಿಸಿಪಿಗಳಾದ ಶಾಂತರಾಜು, ಸಂಜೀವ ಪಾಠೀಲ್, ಎಸಿಪಿ ಶೃತಿ, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಮಂಗಳೂರು ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ವೆಂಕಟೇಶ್.ಹೆಚ್, ಉಳ್ಳಾಲ ಸಬ್ ಇನ್ಸ್ ಪೆಕ್ಟರ್ ರಾಜೇಂದ್ರ ಸಹಿತ ಭೇಟಿ ನೀಡಿ ಬಿಗಿಬಂದೋಬಸ್ತ್ ಏರ್ಪಡಿಸಿದ್ದಾರೆ. ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದು, ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ,


