ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಅಂಬ್ಲಮೊಗರು: ಅಂಬ್ಲಮೊಗರು ಪಂಚಾಯತ್ ವ್ಯಾಪ್ತಿಯ ತಾರಿಪಡ್ಪು ಎಂಬಲ್ಲಿ ಕೊಳವೆಬಾವಿ ತೆಗೆಯುವುದನ್ನು ವಿರೋಧಿಸಿದ ತಾರಿಗುಡ್ಡೆ ಕೆರೆಬೈಲು, ಬರುವ ನಿವಾಸಿಗಳು ಕಾಮಗಾರಿಗೆ ತಡೆಯೊಡ್ಡಿದ ಘಟನೆ ಗುರುವಾರ ನಡೆದಿದೆ.
ತಾರಿಪಡ್ಪು ಪ್ರದೇಶದಲ್ಲಿ ಈಗಾಗಲೇ ಮೂರು ಕೊಳವೆಬಾವಿಗಳನ್ನು ಕೊರೆಯಲಾಗಿದೆ. 100 ಕ್ಕಿಂತಲೂ ಅಧಿಕ ಮನೆಗಳಿಗೆ ಪಂಚಾಯಿತಿ ವತಿಯಿಂದ ಕೊಡುತ್ತಿರುವ ನೀರು ಇಲ್ಲಿನ ಕೊಳವೆಬಾವಿಗಳಿಂದಲೇ ಹೋಗುತ್ತಿದೆ. ಮತ್ತೆ ಇದೀಗ ಗ್ರಾಮದ 300 ರಷ್ಟು ಮನೆಗಳಿರುವ ಮದಕ ಪ್ರದೇಶಕ್ಕೆ ನೀರು ಕೊಡಲು ತಾರಿಪಡ್ಪು ಬಳಿ ಕೊಳವೆಬಾವಿ ನಿರ್ಮಿಸಲು ಇಂದು ಬೋರ್‍ವೆಲ್ ಕೊರೆಯುವ ಯಂತ್ರ ಆಗಮಿಸಿತ್ತು. ಇದನ್ನು ಕಂಡ ಸ್ಥಳೀಯರು ಕಾಮಗಾರಿ ನಡೆಸದಂತೆ ತಡೆಯೊಡ್ಡಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಅಂಬ್ಲಮೊಗರು ಪಂಚಾಯತ್ ಅಧ್ಯಕ್ಷ ರಫೀಕ್ ಅವರ ಜತೆಗೆ ಸ್ಥಳೀಯರು ವಾಗ್ವಾದಕ್ಕೆ ಇಳಿದರು. ಸ್ಥಳದಲ್ಲಿ ಮೂರು ಕೊಳವೆಬಾವಿ ನಿರ್ಮಿಸಿದಾಗಲೂ ವಿರೋಧ ವ್ಯಕ್ತಪಡಿಸಿಲ್ಲ. ಇಡೀ ಅಂಬ್ಲಮೊಗರು ಪಂಚಾಯಿತಿ ವ್ಯಾಪ್ತಿ ಬಹುದೊಡ್ಡ ಇರುವಾಗ ಒಂದೇ ಪ್ರದೇಶವನ್ನು ಕೇಂದ್ರೀಕರಿಸಿ ಕೊಳವೆ ಬಾವಿ ನಿರ್ಮಿಸುವುದರಲ್ಲಿ ಅರ್ಥವಿಲ್ಲ. ಸ್ಥಳದಲ್ಲಿರುವ ಮನೆಗಳ ಬಾವಿಗಳಲ್ಲಿ ಈಗಾಗಲೇ ನೀರು ಬತ್ತಿ ಹೋಗಿವೆ. ಅಡಿಕೆ, ತೆಂಗಿನ ಮರಗಳು ನೀರಿಲ್ಲದೆ ಸೊರಗುತ್ತಿದೆ. ಪಂಚಾಯಿತಿನಿಂದಲೂ ಯಾವುದೇ ವ್ಯವಸ್ಥೆಯಿಲ್ಲ. ಇಂತಹ ಸ್ಥಿತಿ ತಾರಿಪಡ್ಪು ಜನರಿಗೆ ಇರುವಾಗ ಮತ್ತೆ ಕೊಳವೆಬಾವಿ ನಿರ್ಮಿಸಲು ಬಿಡುವುದಿಲ್ಲ ಎಂದು ಜನ ಪಟ್ಟು ಹಿಡಿದರು. ಈ ವೇಳೆ ಸ್ಥಳೀಯರನ್ನು ಸಮಾಧಾನಿಸಿದ ಪಂಚಾಯತ್ ಅಧ್ಯಕ್ಷ ರಫೀಕ್ ಅವರು ಸ್ಥಳದಲ್ಲಿರುವ 10 ಕ್ಕೂ ಅಧಿಕ ಮನೆಗಳಿಗೆ ಕೊರೆಯುವ ಬೋರ್ ವೆಲ್ ನಿಂದ ನೀರು ಒದಗಿಸುವುದಾಗಿಯೂ, ಅದಕ್ಕಾಗಿ ಪೈಪ್ ಲೈನ್ ನಡೆಸಿಕೊಡುವ ಭರವಸೆಯನ್ನು ನೀಡಿದರು. ಅಲ್ಲದೆ ರಸ್ತೆ ವ್ಯವಸ್ಥೆಯೂ ಸರಿಯಿಲ್ಲದಿರುವುದನ್ನು ದುರಸ್ತಿಗೊಳಿಸುವ ಭರವಸೆ ಜತೆಗೆ ಪಂಚಾಯಿತಿನಲ್ಲಿ ಸಹಿ ಹಾಕಿ ಭರವಸೆಯ ಪತ್ರವನ್ನು ನೀಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆಂiÀiನ್ನು ಕೈಬಿಟ್ಟಿದ್ದಾರೆ.
ಸ್ಥಳೀಯರಾದ ಚೇತನ್,ಹೆನ್ರಿ ಡಿಸೋಜಾ, ಉಮಾನಾಥ, ರಾಜೇಶ್, ರೇವತಿ, ಕಮಲ, ಬೇಬಿ, ವಸಂತಿ, ಉದಯ, ಜನಾರ್ದನ್, ಗಂಗಯ್ಯ, ಕುಸುಮ ಮೊದಲಾದವರು ಇದ್ದರು.


