ಉಳ್ಳಾಲ ನ್ಯೂಸ್ ನೆಟ್ವರ್ಕ್
ಕೊಣಾಜೆ: ಮಂಗಳೂರು ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮುಂದಿನ ಎಪ್ರಿಲ್ ತಿಂಗಳಲ್ಲೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಾಗಲಿದ್ದು, ಮಂಗಳೂರು ಘಟಕ ಕಾಲೇಜುಗಳಲ್ಲೂ ಈ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದ್ದಾರೆ.
ಮಂಗಳವಾರ ವಿವಿಯ ಹೊಸ ಸೆನೆಟ್ ಸಭಾಂಗಣದಲ್ಲಿ ಮಂಗಳವಾರ ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಹಾಗೂ 2017-18ನೇ ಸಾಲಿನ ಬಜೆಟ್ ಮಂಡನಾ ಸಭೆಯಲ್ಲಿ ಹೇಳಿದರು.

ವಿವಿಯಲ್ಲಿ ಹಲವು ವಿಭಾಗಗಳಿರುವುದರಿಂದ ಕೆಲವೊಂದು ಕೊರತೆಗಳು ಸಾಮಾನ್ಯ, ಆದರೂ ಶೈಕ್ಷಣಿಕವಾಗಿ ತೊಂದರೆಯಾಗದ ರೀತಿಯಲ್ಲಿ ನೂತನ ತಂತ್ರಜ್ಞಾನಗಳನ್ನು ನಿಭಾಯಿಸಲಾಗುತ್ತಿದೆ. ವಿವಿಯಲ್ಲಿ ಸೆಂಟರ್ ಫಾರ್ ಅಪ್ಲಿಕೇಶನ್ ಆಫ್ ರೇಡಿಯೋಸೊಟೊಫರ್ಸ್ ಆ್ಯಂಡ್ ರೇಡಿಯೇಶನ್ ಟೆಕ್ನಾಲಜಿ (ಸಿಎಆರ್ಆರ್ಟಿ) ಸ್ಥಾಪನೆ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 22 ಕೋಟಿ ಯೋಜನೆಯಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿ ಹಾಗೂ ಅತಿಥಿ ಗೃಹ ನಿರ್ಮಾಣವಾಗುತ್ತಿದ್ದು ಇದರಿಂದ ವಿದ್ಯಾರ್ಥಿಗಳ ಪೋಷಕರಿಗೂ ಅನುಕೂಲವಾಗಲಿದೆ ಎಂದ ಅವರು ಮಂಗಳೂರು ವಿವಿಯಡಿ 150 ಖಾಸಗಿ, 32 ಸರ್ಕಾರಿ, 19ಬಿಎಡ್-ಬಿಪಿಟಿ, 5 ಸ್ವಾಯತ್ತೆ ಹಾಗೂ ನಾಲ್ಕು ವಿವಿ ಘಟಕ ಕಾಲೇಜುಗಳ ಸಹಿತ ಒಟ್ಟು 215 ಕಾಲೇಜುಗಳಿವೆ. 34 ಸರ್ಕಾರಿ ಸಹಿತ 177 ಕಾಲೇಜುಗಳ ಮುಂದುವರಿಕಾ ಶಿಕ್ಷಣ ಸಂಯೋಜನೆ ಮಂಜೂರಾತಿ ನೀಡಲಾಗುತ್ತಿದೆ. ಅವುಗಳ ಪೈಕಿ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಗ್ರೀನ್ ಮೌಂಟೆನ್ ವಿದ್ಯಾಸಂಸ್ಥೆಯಲ್ಲಿ ಶೌಚಾಲಯ ಸಹಿತ ಮೂಲಭೂತ ಸಮಸ್ಯೆಗಳು ಕಂಡು ಬಂದಿದೆ ಎಂದರು.
ಕೊರತೆ ಬಜೆಟ್ ಮಂಡನೆ :
ಹಣಕಾಸು ಅಧಿಕಾರಿ ಪ್ರೊ.ಶ್ರೀಪತಿ ಕಲ್ಲೂರಾಯ ಕೊರತೆ ಬಜೆಟ್ ಮಂಡಿಸಿದರು. 2017-18ನೇ ಸಾಲಿನಲ್ಲಿ ಯೋಜನೆ ಆದಾಯ 110.35 ಕೋಟಿ ಅಂದಾಜಿಸಲಾಗಿದ್ದರೆ, ಯೋಜನೇತರ ಆದಾಯ 177,13 ಕೋಟಿ, ಯೋಜನೇತರ ಖರ್ಚು 170.82 ಕೋಟಿ, ಯೋಜನೆ ಖರ್ಚು 122.47 ಕೋಟಿ ಅಂದಾಜಿಸಲಾಗಿದೆ. 2016-17ರಲ್ಲಿ ಯೋಜನೆ ಆದಾಯ 59.08 ಕೋಟಿ, ಯೋಜನೇತರ ಆದಾಯ 159.92 ಕೋಟಿ, ಯೋಜನೇತರ ಖರ್ಚು 155.21 ಕೋಟಿ ಆಗಿತ್ತು.
ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ 2017-18ನೇ ಸಾಲಿನಲ್ಲಿ 287.48 ಕೋಟಿ ಸ್ವೀಕೃತಿ ಅಂದಾಜಿಸಲಾಗಿದ್ದು, ಕಳೆದ ಸಾಲಿನಲ್ಲಿ 293.30 ಕೋಟಿ ಆಗಿತ್ತು. ಇದನ್ನು ಗಮನಿಸಿದಾಗ ಈ ವರ್ಷ 5.81ಕೋಟಿ ಕೊರತೆಯಾಗಲಿದ್ದು, 2016-17ರಲ್ಲಿ 4.87 ಕೋಟಿ ಕೊರತೆಯಯಾಗಿತ್ತು. ಈ ಸಾಲಿನಲ್ಲಿ ಕಳೆದ ವರ್ಷಕ್ಕಿಂತ 94 ಲಕ್ಷ ರೂಪಾಯಿ ಕೊರತೆ ಹೆಚ್ಚಾಗಿದೆ. ಈ ವರ್ಷ ಸರ್ಕಾರದಿಂದ ಅನುದಾನ ಹೆಚ್ಚು ಬರುವ ನಿರೀಕ್ಷೆ ಹೊಂದಲಾಗಿದ್ದು, ಹಳೆ ವಿದ್ಯಾರ್ಥಿ ಸಂಘ, ದಾನಿಗಳ ದೇಣಿಗೆಯಿಂದ ಆಯವ್ಯಯದಲ್ಲಿನ ಕೊರತೆ ನೀಗಲಿಸಲು ಸಾಧ್ಯ. ನಿರೀಕ್ಷೆಯಂತೆ ಅನುದಾನ ಬರಲಿದ್ದಲ್ಲಿ ಆಡಳಿತಾತ್ಮಕ ವೆಚ್ಚಗಳನ್ನು ಕಡಿತಗೊಳಿಸಿ, ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಂಡು ಹೊಸ ಕಾಮಗಾರಿಗಳನ್ನು ಕೈಬಿಡಬೇಕಾಗಬಹುದು ಎಂದು ಶ್ರೀಪತಿ ಕಲ್ಲೂರಾಯ ತಿಳಿಸಿದರು.
11 ಹೊಸ ಕಾಲೇಜುಗಳು :
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಹೊಸ 11 ಕಾಲೇಜುಗಳಿಗೆ ಶೈಕ್ಷಣಿಕ ಸಭೆಯಲ್ಲಿ ಅನುಮೋದನೆ ದೊರೆತಿದೆ. ಕುಂದಾಪುರದ ಡಾ.ಬಿ.ಬಿ ಹೆಗ್ಡೆ ಸಂಧ್ಯಾ ಕಾಲೇಜು, ಬಜಪೆ ಕೊಳಂಬೆಯ ಪನಾ ಇನ್ಸ್ಟಿಟ್ಯೂಟ್ ಆಫ್ ಸ್ಟಡೀಸ್, ಉಡುಪಿ ಮೂಳೂರಿನಲ್ಲಿ ಆಲ್ ಇಷಾನ್ ಮಹಿಳೆಯರ ಪ್ರಥಮ ದರ್ಜೆ ಕಾಲೇಜು, ಮಂಗಳೂರಿನ ಸಮ್ವಿಟ್ ವಿದ್ಯಾಸಂಸ್ಥೆ, ಕುಂದಾಪುರ ಕಂಬದಕೋಣೆಯಲ್ಲಿ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು , ಮಡಿಕೇರಿ ಕುಶಾಲನಗರದ ಅನುಗ್ರಹ ಮಹಿಳೆಯರ ಪ್ರಥಮ ದರ್ಜೆ ಕಾಲೇಜು, ಕುಂಟಿಕಾನ ಎ.ಜೆ ಶೆಟ್ಟಿ ವಿದ್ಯಾ ಸಂಸ್ಥೆಯ ವಾಕ್ ಶ್ರವಣ ವಿಭಾಗ, ಪುತ್ತೂರು ಮೆಧಾ ಕಾಲೇಜು, ಕುಶಾಲನಗರ ಎಸ್.ಎಸ್ ಪದವಿ ಕಾಲೇಜು, ಹಾರ್ವರ್ಡ್ ಫೈರ್ ಆ್ಯಂಡ್ ಸೇಫ್ಟಿ, ಮಡಿಕೇರಿಯಲ್ಲಿ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸೈನ್ಸ್ ಕಾಲೇಜುಗಳಿಗೆ ಅನುಮೋದನೆ ದೊರೆತಿದೆ.
ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಹಾಗೂ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಉಪಸ್ಥಿತರಿದ್ದರು.


