ಉಳ್ಳಾಲ ನ್ಯೂಸ್ ನೆಟ್ವರ್ಕ್
ದೇರಳಕಟ್ಟೆ: ಇಂದಿನ ಯುವಜನತೆ ಧೂಮಪಾನದಂತಹ ಪಿಡುಗುಗಳಿಗೆ ಬಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಕಾರ್ಯದಲ್ಲಿ ಕ್ಷೇಮ ಮಾನಸಿಕ ಚಿಕಿತ್ಸಾ ವಿಭಾಗ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ| ಶಿವಕುಮಾರ್ ಹೀರೆಮಠ್ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್,ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮಾನಸಿಕ ಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಕ್ಷೇಮದ ಮಿಷನ್ ಹೋಪ್ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ `ಧೂಮಪಾನ ರಹಿತ ಸಪ್ತಾಹ’ದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ್ಷೇಮ ವೈಸ್ ಡೀನ್ ಮತ್ತು ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ| ಪಿ.ಎಸ್. ಪ್ರಕಾಶ್ ಮಾತನಾಡಿ ಧೂಮಪಾನ ಮತ್ತು ಕುಡಿತದಂತಹ ಪಿಡುಗುಗಳಿಂದ ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯುವಜನರು ಜಾಗೃತಿ ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವೈಸ್ ಡೀನ್ ಡಾ| ಅಮೃತ್ ಮಿರಾಜ್ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಎರಡನೇ ಹಂತದಲ್ಲಿ ಕ್ಷೇಮ ಸಾರ್ವಜನಿಕ ಆರೋಗ್ಯ ವಿಭಾಗದ ಡಾ| ಜಗನ್ನಾಥ, ಯೆನೆಪೋಯ ಮನೋರೋಗ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಅನಿಲ್ ಕಕ್ಕುಂಜೆ, ಕ್ಷೇಮ ಜನರಲ್ ಮೆಡಿಸಿನ್ ವಿಭಾಗದ ಡಾ| ಅದಿತಿ ಕೆ. ಮಾಹಿತಿ ನೀಡಿದರು.
ಧೂಮಪಾನ ನಿಷೇಧ ಸಪ್ತಾಹದ ಅಂಗವಾಗಿ ನಿಟ್ಟೆ ವಿಶ್ವ ವಿದ್ಯಾನಿಲಯದ ಅಧೀನಕ್ಕೊಳಪಟ್ಟಿರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ `ಪೋಸ್ಟರ್’ ರಚಿಸುವ ಸ್ಪರ್ಧೆ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವಿವಿಧ ವಾರ್ಡ್ಗಳಲ್ಲಿ ಕಿರು ಪ್ರಹಸನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಕ್ಷೇಮ ಮಾನಸಿಕ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಸತೀಶ್ ರಾವ್ ಸ್ವಾಗತಿಸಿದರು. ಶ್ರೇಯ ಶೆಟ್ಟಿ ವಂದಿಸಿದರು. ಸುಮನ್ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು.



