ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: 30 ಲಕ್ಷ ಅನುದಾನದಲ್ಲಿ ಒಂಬತ್ತುಕೆರೆ ಐಟಿಐಯಿಂದ ತೊಕ್ಕೊಟ್ಟು ಓವರ್ಬ್ರಡ್ಜ್ವರೆಗಿನ ಒಳರಸ್ತೆ ಅಗಲೀಕರಣ ಕಾಮಗಾರಿಗೆ ಆಹಾರ ಹಾಗೂ ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಮಂಗಳವಾರ ಶಿಲಾನ್ಯಾಸಗೈದರು.
ಬಳಿಕ ಮಾತನಾಡಿದ ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ಬಹುತೇಕ ರಸ್ತೆಗಳು ಅಭಿವೃದ್ಧಿಯಾಗಿದ್ದು, ಮಂಗಳೂರಿನ ನಂತರ ಅತ್ಯುತ್ತಮ ಅಭಿವೃದ್ಧಿಹೊಂದಿದ 2ನೇ ನಗರವನ್ನಾಗಿ ಉಳ್ಳಾಲವನ್ನು ರೂಪಿಸಿ ರಾಜ್ಯದಲ್ಲೇ ಮಾದರಿಯನ್ನಾಗಿಸುವ ಗುರಿ ಹೊಂದಲಾಗಿದ್ದು ಮುಕಚ್ಚೇರಿಯಿಂದ ಅಬ್ಬಕ್ಕ ವೃತ್ತದವರೆಗೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಭಾಗದಲ್ಲಿ ನಗರೋತ್ಥಾನ ಅನುದಾನದಲ್ಲಿ 1.85 ಕಿ.ಮೀ. ರಸ್ತೆ ಅಭಿವೃದ್ಧಿಗೆ, ಇಕ್ಕೆಲೆಗಳಲ್ಲಿ ಅಗಲೀಕರಣ, 250 ಮೀಟರ್ಗೆ ಕಾಂಕ್ರೀಟ್ ಕಾಮಗಾರಿ ನಡೆಯಲಿದ್ದು, 1.34 ಕೋಟಿ ಅನುದಾನ ಮೀಸಲಿಡಲಾಗಿದೆ. ಉಳ್ಳಾಲ ಮಾದರಿ ನಗರ ನಿರ್ಮಾಣದ ಕನಸು ಹೊಂದಲಾಗಿದ್ದು ಸರ್ವರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಕಾಮಗಾರಿಗೆ ಶಿಲಾನ್ಯಾಸಗೈದರು. ನಗರಸಭಾಧ್ಯಕ್ಷ ಹುಸೈನ್ ಕುಂಞÂಮೋನು, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸದಸ್ಯರಾದ ದಿನೇಶ್ ರೈ, ಮಹಮ್ಮದ್ ಮುಕಚ್ಚೇರಿ, ಪೌರಾಯುಕ್ತೆ ವಾಣಿ ವಿ.ಆಳ್ವ, ಕಿರಿಯ ಅಭಿಯಂತರ ದಿವಾಕರ್, ಮುಖಂಡ ಅಯೂಬ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.


