ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಮಹಿಳೆಯರು ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲುಗಳನ್ನು ಎದುರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ನಮ್ಮ ಭ್ರಮೆಯ ಬದುಕನ್ನು ದೂರಗೊಳಿಸಿ ವಾಸ್ತವದ ಬದುಕನ್ನು ನಮ್ಮದಾಗಿಸಿಕೊಂಡು ನಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸೋಣ ಎಂದು ಮಂಗಳೂರು ವಿವಿ ಕಾಲೇಜಿನ ಪ್ರಾಧ್ಯಾಪಕಿ ಭುವನೇಶ್ವರಿ ಹೆಗ್ಡೆ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಬುಧವಾರ ಮಂಗಳಾ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ನಮ್ಮ ಮೇಲೆ ಆಗುವ ಬಾಹ್ಯ ಆಕ್ರಮಣಗಳನ್ನು ಎದುರಿಸಲು ಸನ್ನದ್ದರಾಗುವಂತೆ ನಾವು ಸಾಹಿತ್ಯ, ಸಂಸ್ಕøತಿಯ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಮಾನಸಿಕವಾಗಿಯೂ ನಮ್ಮ ಆತ್ಮಸೈರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಗಟ್ಟಿ ಸ್ವಭಾವದವಾಗಿರುವುದು ವಿಶೇಷವಾಗಿದ್ದು ಇದು ಇಲ್ಲಿಯ ಮಣ್ಣಿನ, ಸಂಸ್ಕøತಿಯ ಲಕ್ಷಣವಾಗಿರಬಹುದು ಎಂದರು.
ಇಂದು ವಾಟ್ಸಪ್ ಎಂಬುದು ನಮ್ಮ ದಿನಚರಿಯಾಗಿದ್ದು ವಿದ್ಯಾರ್ಥಿ ಸಮುದಾಯ ಪರೀಕ್ಷೆಗೆ ತಯಾರಾಗಲೂ ಇದು ಅಡ್ಡಿಯಾಗುತ್ತಿದೆ. ಆದ್ದರಿಂದ ಯುವ ಸಮುದಾಯ ಇದಕ್ಕೆ ಬಲಿಯಾಗದೆ ಉತ್ತಮ ವಿದ್ಯಾಭ್ಯಾಸದ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಸಚಿವ ಪ್ರೊ.ಲೊಕೇಶ್ ಅವರು, ನಮ್ಮ ದೇಶದಲ್ಲಿ ಸತೀ ಪದ್ದತಿಯಂತ ಆಚರಣೆಯೊಂದಿಗೆ ಮಹಿಳೆಯರ ಮೇಲೆ ಹಲವಾರು ದೌರ್ಜನ್ಯಗಳು ನಡೆಯುತ್ತಿತ್ತು. ಬಳಿಕ ಸಮಾಜಸುದಾರಕರ ಹೋರಾಟದ ಪರಿಣಾಮವಾಗಿ ಇಂತಹ ಆಚರಣೆಗಳು ಕಡಿಮೆಯಾಗಿ ಮಹಿಳೆಯರು ಇಂದು ಸಮಾಜದಲ್ಲಿ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಆದರೂ ಕೂಡಾ ಶಿಕ್ಷಣ ಮುಂದುವರಿದಿದ್ದರೂ ಕೂಡಾ ಮಹಿಳೆಯರ ಮೇಲಿನ ಆಗುವ ವಿಭಿನ್ನ ರೀತಿಯ ದೌರ್ಜನ್ಯಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ ಎಂದು ಹೇಳಿದರು.
ಸಮಾರಂಭದ ಆರಂಭದಲ್ಲಿ ಕಾರ್ತಿಕ್ ಕಟೀಲ್ ಹಾಗೂ ಶೋಭಲತಾ ಅವರು ಮಹಿಳೆಯರ ಸ್ವರಕ್ಷಣೆಯ ಕೆಲವು ತಂತ್ರಗಾರಿಕೆಯ ಬಗ್ಗೆ ಡೆಮೋ ಮೂಲಕ ಮಾಹಿತಿ ನೀಡಿದರು.
ಕಾರ್ಯಕ್ರಮಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರಾದ ಕೊಣಾಜೆಯ ಕೃಷಿಕ ಮಹಿಳೆ ಮುತ್ತು ಶೆಟ್ಟಿ, ವೇದಾವತಿ ಗಟ್ಟಿ, ಆಂಬುಲೆನ್ಸ್ ಚಾಲಕಿ ರಾಧಿಕಾ, ಡೆಕ್ಕಾನ್ ಹೆರಾಲ್ಟ್ ಪತ್ರಿಕೆಯ ನಯನಾ ಜೆ.ಎ, ಶೋಭಲತಾ ಮತ್ತು ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ.ಅನಿತಾ ರವಿಶಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಶಶಿರೇಖಾ ವಂದಿಸಿದರು. ರಸಾಯನಶಾಸ್ತ್ರ ಪ್ರಾಧ್ಯಾಪಕಿ ಡಾ.ಸರೋಜಿನಿ ಅವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಂಗಳೂರು ವಿವಿಯ ಮಹಿಳಾ ಸಿಬ್ಬಂದಿಗಳಿಂದ `ತುಳುನಾಡ ವೈಭವ’ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.



