ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟೆಕಾರು, ಕಿನ್ಯಾ, ಬೆಳ್ಮ ಪ್ರದೇಶದಲ್ಲಿ ಪಡಿತರ ಸಾಮಾಗ್ರಿಗಳು ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಣಯಕ್ಕೆ ಪಡಿತರ ಅಂಗಡಿಯ ಮಾಲೀಕರು ಮುಂದಾಗಿದ್ದಾರೆ.
ಕೂಪನ್ ವ್ಯವಸ್ಥೆ ಜಾರಿಯಾದ ದಿನದಿಂದ ಈ ಸಮಸ್ಯೆಯನ್ನು ಪಡಿತರ ಅಂಗಡಿಯವರು ಅನುಭವಿಸುತ್ತಿದ್ದು ಯಾವುದೇ ರೇಷನ್ ಅಂಗಡಿಯವರಿಗೆ ಲಭ್ಯವಾಗುತ್ತಿಲ್ಲ. ಸರಿಯಾದ ಸಮಯದಲ್ಲಿ ಸಾಮಗ್ರಿಗಳು ಪೂರೈಕೆಯಾಗದ ಕಾರಣ ಕೂಪನ್ ಹಿಡಿದು ಬರುವ ಕಾರ್ಡುದಾರರಿಗೆ ರೇಷನ್ ಸಾಮಗ್ರಿಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಸರಿಪಡಿಸುವ ತನಕ ಪಡಿತರ ಅಂಗಡಿಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ ಅನ್ನುವುದು ಅಂಗಡಿ ಮಾಲೀಕರ ಅಳಲಾಗಿದೆ .
ನೂತನ ವ್ಯವಸ್ಥೆಯಿಂದ ತೊಂದರೆ :
ಆಹಾರ ಸಚಿವರು ನೂತನ ಕಾನೂನು ಜಾರಿಗೆ ಬಂದ ಬಳಿಕ ಜನ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಕೂಪನ್ ವ್ಯವಸ್ಥೆ ಸಾರ್ವಜನಿಕರಿಗೆ ಸಿಕ್ಕಿದ್ದರೂ, ಅದರಲ್ಲಿ ಉಲ್ಲೇಖಿಸಿದಂತೆ ಅಕ್ಕಿಯನ್ನು ವಿತರಿಸಬೇಕಾಗಿದೆ. ಆದರೆ ಕೂಪನ್ ಕುರಿತ ಸಂಖ್ಯೆಯನ್ನು ಅಂಗಡಿ ಮಾಲೀಕರು ಆಹಾರ ಇಲಾಖೆಗೆ ಸಲ್ಲಿಸಬೇಕಾಗಿದೆ. ಆದರೆ ಸೈಬರಿನಲ್ಲಿ ಅದನ್ನು ಅಪ್ ಲೋಡ್ ಮಾಡಲು ಅಸಾಧ್ಯವಾಗದ ಕಾರಣ ಅಕ್ಕಿ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಗ್ರಾಹಕರು ಅಂಗಡಿ ಮಾಲೀಕರನ್ನು ಬೈಯ್ಯುವಂತಹ ಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಸಾಮಗ್ರಿಗಳು ಸರಿಯಾಗಿ ಪೂರೈಕೆಯಾಗದೆ ಜನ ಬಂದು ವಾಪಸ್ಸು ಹೋಗುವಂತಹ ಸ್ಥಿತಿಯಿಂದ ರೋಸಿ ಹೋಗುವಂತಾಗಿದೆ.
ಅಕ್ಕಿಯನ್ನೇ ಸರಿಯಾಗಿ ವಿತರಿಸಲು ಸಾಧ್ಯವಾಗದ ಸರಕಾರಕ್ಕೆ ಇನ್ನು ಪೌಷ್ಠಿಕಾಂಶಯುಕ್ತವಾದ ಧಾನ್ಯಗಳನ್ನು ಹೇಗೆ ತಾನೇ ವಿತರಿಸಲು ಸಾಧ್ಯ. 123 ಕಿಂಟಲ್ ಅಕ್ಕಿಯನ್ನು ವಿತರಿಸುವವರು ಅದರಲ್ಲಿ 90ಕಿಂಟಲ್ ಅಕ್ಕಿಯನ್ನು ಕಡಿತಗೊಳಿಸಿ ಕೇವಲ 30ಕಿಮಟಲ್ ಅಕ್ಕಿಯನ್ನು ನೀಡಿದರೆ ಬರುವ 600ಕಿಂತಲೂ ಹೆಚ್ಚು ಪಡಿತರ ಕಾರ್ಡ್ ಹೊಂದಿದ ಜನರಿಗೆ ಯಾವ ಪ್ರಮಾಣದಲ್ಲಿ ಹಂಚಿಕೆ ಮಾಡುವುದು. ಅದಕ್ಕೆ ವ್ಯತಿರಿಕ್ತವಾಗಿ ಜನರಿಂದ ಬೈಗುಳ ತಿನ್ನಬೇಕಾದ ಪ್ರಮೇಯ ಎದುರಾಗಿದೆ. ಈ ಸಮಸ್ಯೆ ಸರಿಯಾಗುವವರೆಗೆ ಯಾವುದೇ ಪಡಿತರ ಕಾರಣಕ್ಕೂ ಅಂಗಡಿಯನ್ನು ತೆರೆಯಲು ಸಾಧ್ಯವಿಲ್ಲದಂತಾಗಿದೆ ಅನ್ನುವ ಅಭಿಪ್ರಾಯವೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಕಿನ್ಯಾ, ಕೋಟೆಕಾರು, ಬೆಳ್ಮ, ಪಾವೂರು, ಮಂಜನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ತೊಂದರೆ ಎದುರಾಗಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಆಹಾರ ಸಚಿವರು ಮತ್ತು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಅಂಗಡಿ ಮಾಲೀಕರು ಮನವಿಯನ್ನು ಸಲ್ಲಿಸಿದ್ದಾರೆ.
ಕೂಪನ್ ವ್ಯವಸ್ಥೆ ಬಳಿಕ ಸಮಸ್ಯೆ ಉದ್ಭವಿಸಿದೆ. ಕೂಪನ್ನಿನಲ್ಲಿ ಉಲ್ಲೇಖಿಸಿದಂತೆ ಅಕ್ಕಿಯನ್ನು ವಿತರಿಸಬೇಕಿದೆ. ಅದಕ್ಕಾಗಿ ಟಿ.ಹೆಚ್.ಎನ್ ಸಂಖ್ಯೆಯನ್ನು ಕೊಡ್ತಾರೆ . ಅದನ್ನು ನಮ್ಮ ಮೊಬೈಲಿನಲ್ಲಿ ಐವಿಆರ್ಎಸ್ ಆಗಿ ಆಹಾರ ಇಲಾಖೆಗೆ ಅಪ್ ಲೋಡ್ ಮಾಡಬೇಕಿದೆ. ಅದನ್ನು ಸೈಬರಿನಲ್ಲಿ ಅಪ್ಡೇಟ್ ಮಾಡಬೇಕಿದೆ. ಸೈಬರಿನವರು ಅಪ್ ಡೇಟ್ ಮಾಡುವ ಸಂದರ್ಭ ಹಲವು ಸಂಖ್ಯೆಗಳು ಅಪ್ ಲೋಡ್ ಆಗಿಲ್ಲ. ಇದರಿಂದಾಗಿ ಅಂಗಡಿಗೆ ಬರಬೇಕಾದ 123 ಕ್ವಿಂಟಾಲ್ ಅಕ್ಕಿಯ ಬದಲು ಕೇವಲ 90 ಕ್ವಿಂಟಾಲ್ ಅಕ್ಕಿ ಮಾತ್ರ ಬಂದಿದೆ. ಆದರೆ ಅಷ್ಟು ಕಡಿಮೆ ಪ್ರಮಾಣದ ಅಕ್ಕಿಯನ್ನು ಗ್ರಾಹಕರಿಗೆ ವಿತರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಗ್ರಾಹಕರು ಅಕ್ಕಿ ಕೊಡದೇ ಇದ್ದಲ್ಲಿ ಹೊಡೆಯಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಅಂಗಡಿ ತೆರೆಯಲಾಗದ ಸ್ಥಿತಿ ಎದುರಾಗಿದೆ. ಈ ಕುರಿತು ಸಚಿವರಲ್ಲಿ ಮಾತನಾಡಿದಾಗ, ಅವರು ಡಿಡಿಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ. ಆದರೆ ಡಿಡಿ ಉಡಾಫೆಯಿಂದ ವರ್ತಿಸಿ ಸ್ಟೋರನ್ನೇ ಕ್ಯಾನ್ಸಲ್ ಮಾಡಬೇಕಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ .
-ಸತೀಶ್
ಕಿನ್ಯಾ ಅಂಗಡಿ ಮಾಲೀಕರು
ಕೆಲವೊಂದು ತಾಂತ್ರಿಕ ದೋಷದಿಂದ ಈ ತೊಂದರೆ ನಡೆದಿದ್ದು, ಕೂಪನ್ ಸರಿಯಾಗಿ ಅಪ್ಡೇಟ್ ಆಗದೇ ಇರುವುದೇ ಸಮಸ್ಯೆಯ ಮೂಲಕ ಕಾರಣ. ಬೆಂಗಳೂರಿನಲ್ಲಿ ಈ ಸಮಸ್ಯೆಯ ಬಗ್ಗೆ ಸಭೆ ಈಗಾಗಲೇ ನಡೆಸಲಾಗಿದೆ. ಇನ್ನು ಎರಡು ದಿನಗಳಲ್ಲಿ ಸಮಸ್ಯೆ ಬಗೆ ಹರಿಯಲಿದ್ದು, ಗ್ರಾಹಕರು ತಮ್ಮ ಹಕ್ಕನ್ನು ಯಾವುದೇ ತೊಂದರೆ ಇಲ್ಲದೇ ಪಡೆದುಕೊಳ್ಳಬಹುದು.
-ಜಯಪ್ಪ
ಉಪ ನಿರ್ದೇಶಕರು, ಆಹಾರ ಇಲಾಖೆ


