ಉಳ್ಳಾಲ ನ್ಯೂಸ್ ನೆಟ್‍ವರ್ಕ್
ದೇರಳಕಟ್ಟೆ: ದೇಶದ ಅಭಿವೃದ್ದಿಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕನ ಮೇಲಿದೆ ಎಂದು ಮಂಡ್ಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಅವರು ನಿಟ್ಟೆ ಶಿಕ್ಷಣ ಸಂಸ್ಥೆ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಿಗೆ ನೀಡುವ `ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಪಡೆದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆ ಮತ್ತು ವೇಣೂರು ಸರಕಾರಿ ಪ್ರೌಢಶಾಲೆಗೆ 15 ಲಕ್ಷ ರೂ . ಮತ್ತು 10 ಲಕ್ಷ ರೂ. ಗಳ ಚೆಕ್ ವಿತರಿಸಿ ಆಶೀರ್ವಚನ ನೀಡಿದರು.
100 ವರ್ಷಗಳ ಹಿಂದೆ ಮೈಸೂರು ಪ್ರಾಂತ್ಯದಲ್ಲಿ ಸಾಕ್ಷರತಾ ಶೇ. 5 ರಷ್ಟಿತ್ತು. ಖಾಸಗಿ ಶಾಲೆಗಳ ಹಾಗೂ ಸರಕಾರಿ ವ್ಯವಸ್ಥೆಯಿಂದ ಸದ್ಯ ಶೇ. 76 ಕ್ಕೆ ಬಂದು ನಿಂತಿದೆ. ಜಗತ್ತು ಆಧುನಿಕ ವಿದ್ಯೆಯತ್ತ ಮುಂದುವರೆಯುತ್ತಿದ್ದರೂ ಸಹ ಇನ್ನು ಆದರೆ ಆಂತರಿಕವಾದ ಸಾಮಾರಸ್ಯದ ವಿದ್ಯೆ ಕಡಿಮೆಯಾಗುತ್ತಿದೆ. ಪ್ರಜ್ಞೆ ಇರುವ ವ್ಯಕ್ತಿಗಳು ಸೋಮಾರಿತನವನ್ನು ಮಾಡದೇ ಹಣಕಾಸು, ಆಧುನಿಕ ಜ್ಞಾನವನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ಹಿಂದುಳಿದಿರುವ ಸಮುದಾಯ, ಸಂಸ್ಥೆಗಳನ್ನು, ಬಡವರನ್ನು ಮೇಲೆತ್ತುವ ಪ್ರಯತ್ನ ಮಾಡಬೇಕಿದೆ. ಶಿಕ್ಷಕರು ಮನಸ್ಸು ಮಾಡಿದರೆ ದೇಶವನ್ನು ಬದಲಾಯಿಸಬಹುದು. ದೇಶದ ಅಭಿವೃದ್ಧಿ ವಿವಿಧ ಆಯಾಮಗಳಲ್ಲಿ ನಡೆದರೂ ಅದಕ್ಕೆ ಮೂಲ ಕಾರಣ ಶಿಕ್ಷಕರು .ಉತ್ತಮವಾದ ಶಿಕ್ಷಕರು ಶಾಲೆಯಲ್ಲಿ ಇದ್ದರೆ ಅಂತಹ ಶಾಲೆಯೂ ಉದ್ದಾರವಾಗುವುದರ ಜೊತೆಗೆ ದೇಶವು ಉದ್ದಾರವಾಗುತ್ತದೆ ಎಂದ ಅವರು ಈ ನಿಟ್ಟಿನಲ್ಲಿ ನಿಟ್ಟೆ ವಿ.ವಿ ಕಾರ್ಯವೈಖರಿ ಶ್ಲಾಘನೀಯ ಎಂದರು.
ಇಧೆ ಸಂದರ್ಭ ಶೈಕ್ಷಣಿಕ ಅಭಿವೃದ್ಧಿ ನಡೆಸಿರುವ ಸರಕಾರಿ ಪ್ರೌಢಶಾಲೆ ನಾಡ ಬೆಳ್ತಂಗಡಿ ಗೆ ಒಂದು ಲಕ್ಷ ರೂ. ನಗದು ಮತ್ತು ಮೂಡಬಿದಿರೆ ತಾಕೋಡೆಯ ಆದರ್ಶ ಪ್ರೌಢಶಾಲೆಗೆ ಎರಡು ಲಕ್ಷ ರೂ. ಆರ್ಥಿಕ ನೆರವಿನ ಚೆಕ್ ನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿ.ವಿ.ಯ ಕಲಾಧಿಪತಿ ಎನ್.ವಿನಯ ಹೆಗ್ಡೆ ವಹಿಸಿದ್ದರು. ಹಾಸನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭೂನಾಥ ಸ್ವಾಮೀಜಿ, ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ , ನಿಟ್ಟೆ ವಿ.ವಿ.ಯ ಉಪಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ , ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಎನ್.ಆರ್ .ಶೆಟ್ಟಿ, ಮಂಗಳೂರು ವಿ.ವಿ ಉಪಕುಲಪತಿ ಪ್ರೊ.ಕೆ.ಬೈರಪ್ಪ, ಡಿಡಿಪಿಐ ವಾಲ್ಟರ್ ಡಿಮೆಲ್ಲೋ, ಟ್ರಸ್ಟಿಗಳಾದ ಬಿ.ಆರ್ ಹೆಗ್ಡೆ ,ಗುರುಪ್ರಸಾದ್ ಅಡ್ಯಂತಾಯ
ಹಣಕಾಸು ವಿಭಾಗ ನಿರ್ದೇಶಕ ರಾಜೇಂದ್ರ.ಎಂ ಸ್ವಾಗತಿಸಿದರು. ಪಠ್ಯೇತರ ವಿಭಾಗದ ನಿರ್ದೇಶಕ ಪ್ರೊ.ರಾಜಶೇಖರ್ .ಎಂ ಕಾರ್ಯಕ್ರಮ ನಿರ್ವಹಿಸಿದರು ನಿಟ್ಟೆ ವಿ.ವಿ.ಯ ಕುಲಸಚಿವ ಡಾ.ಎಂ.ಎಸ್.ಮೂಡಿತ್ತಾಯ ವಂದಿಸಿದರು.


