ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತಲಪಾಡಿ: ಕೇರಳ -ಕರ್ನಾಟಕ ಗಡಿಪ್ರದೇಶ ತಲಪಾಡಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಎರಡನೇ ದಿನಕ್ಕೆ ಪ್ರತಿಭಟನೆ ಮುಂದುವರಿದಿದ್ದು, ಕೇರಳ ಮತ್ತು ಕರ್ನಾಟಕದ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಿಸಿತ್ತು. ಪೊಲೀಸರು ಲಘು ಲಾಠಿ ಚಾರ್ಜ್ ಮೂಲಕ ಪ್ರತಿಭಟನಾಕಾರರನ್ನು ಚದುರಿಸಿದರೂ ಜಗ್ಗದ ಉದ್ರಿಕ್ತರು ನವಯುಗ ಕಂಪೆನಿಯ ತಾತ್ಕಾಲಿಕ ಭರವಸೆಯಿಂದ ಪ್ರತಿಭಟನೆಯಿಂದ ಹಿಂದೆ ಸರಿದರು.


ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ, ಸ್ಥಳೀಯರಿಂದ ಟೋಲ್ ಪಡೆಯದಂತೆ , ರಾ.ಹೆ.66ರ ಕಾಮಗಾರಿ ಪೂರ್ಣಗೊಳಿಸಿಯೇ ಟೋಲ್ ಪಡೆಯುವಂತೆ ಆಗ್ರಹಿಸಿ ಬುಧವಾರ ಗಡಿನಾಡು ರಕ್ಷಣಾ ವೇದಿಕೆ, ಕಾಂಗ್ರೆಸ್ನ ಮಂಜೇಶ್ವರ ಮತ್ತು ತಲಪಾಡಿಯ ಮುಖಂಡರು , ರಿಕ್ಷಾ, ಬಸ್ಸು ಚಾಲಕ ಮಾಲಕರು ಪ್ರತಿಭಟನೆ ನಡೆಸಿದ್ದರು. 12 ಮಂದಿಯ ಬಂಧನದಿಂದ ಪ್ರತಿಭಟನೆ ಅಲ್ಲಿಗೆ ನಿಂತಿತ್ತು. ಗುರುವಾರ ಮತ್ತೆ ಗಡಿನಾಡು ರಕ್ಷಣಾ ವೇದಿಕೆ, ಮಂಜೇಶ್ವರದ ಯುಡಿಎಫ್, ಎಸ್ ಡಿಪಿಐನ ಮಂಜೇಶ್ವರ ಮತ್ತು ಉಳ್ಳಾಲ ಬ್ಲಾಕ್ ಸೇರಿದಂತೆ ಗ್ರಾಮಸ್ಥರು ಟೋಲ್ ನ ಎರಡು ಕಡೆಗಳಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಯುಡಿಎಫ್ ಬೆಂಬಲಿತರು ತಲಪಾಡಿಯಿಂದ ಮಾಚ್ ್ ನಡೆಸಿ ಟೋಲ್ ಎದುರುಗಡೆ ನಿಂತು ಟೋಲ್ ಸಂಗ್ರಹ ಕೊಠಡಿಗೆ ನುಗ್ಗಲು ಯತ್ನಿಸಿದರೆ, ಇನ್ನೊಂದೆಡೆ ಕರ್ನಾಟಕದ ವಿವಿಧ ಸಂಘಟನೆಗಳು ಟೋಲ್ ನ ಇನ್ನೊಂದು ಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಎರಡು ಕಡೆಗಳಲ್ಲಿ ಉಳ್ಳಾಲ , ಕೆಎಸ್ಆರ್ಪಿ ಹಾಗೂ ಮಂಗಳೂರು ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರೆ, ಉದ್ರಿಕ್ತ ಗುಂಪುಗಳು ಟೋಲ್ ಸಂಗ್ರಹ ನಡೆಸದಂತೆ ಘೋಷಣೆಗಳನ್ನು ಕೂಗುತ್ತಾ ನುಗ್ಗಲು ಯತ್ನಿಸಿದರು. ಯುಡಿಎಫ್ ಕಡೆಯಲ್ಲಿ ಮಂಜೇಶ್ವರದ ಶಾಸಕ ಅಬ್ದುಲ್ ರಝಾಕ್ ಭಾಗವಹಿಸಿ ಕಾಮಗಾರಿ ಪೂರ್ಣಗೊಳಿಸದೆ ಮಂಗಳೂರಿಗೆ ತೆರಳಲು ತಡೆಯಾಗುತ್ತಿದೆ. ಆದರೆ ಇದೀಗ ಟೋಲ್ ಆರಂಭಗೊಂಡು ಇಲ್ಲಿಯೂ ಒಂದೆಡೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದರೆ, ಹಣವನ್ನು ಪಡೆದು ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದಾರೆ. ಕೂಡಲೇ ಸುಂಕ ವಸೂಲಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಮಂಜೇಶ್ವರದ ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿ ಮಾತನಾಡಿ ಮೊದಲಿಗೆ ಕಾಮಗಾರಿಯನ್ನು ಮುಗಿಸಲಿ ಆನಂತರ ಸುಂಕ ಪಡೆದುಕೊಳ್ಳಲಿ ಎಂದು ಒತ್ತಾಯಿಸಿದರು. ಈವೇಳೆ ವಾಹನಗಳನ್ನು ತಡೆಯಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಚದುರಿಸಿದರು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿ ಒಂದು ಕಡೆಯ ಪ್ರತಿಭಟನಾಕಾರರು ಮಂಗಳೂರಿಗೆ ತೆರಳಿದರು. ಇನ್ನೊಂದೆಡೆ ಗಡಿನಾಡು ರಕ್ಷಣಾ ವೇದಿಕೆ ಹಾಗೂ ಎಸ್ ಡಿಪಿಐ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ಉದ್ರಿಕ್ತ ಸ್ಥಿತಿಗೆ ತಲುಪಿ, ಪೊಲೀಸರು ಮುಖಂಡರನ್ನು ಬಂಧನಕ್ಕೆ ಯತ್ನಿಸಿದರು. ಆದರೆ ಉದ್ರಿಕ್ತ ಗುಂಪು ಅವರನ್ನು ತಡೆದು ನಿಲ್ಲಿಸಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ ನವಯುಗ್ ಸಂಸ್ಥೆಯ ಅಧಿಕಾರಿ ಭರವಸೆ ನೀಡದೇ ಇದ್ದಲ್ಲಿ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಸ್ಪಂಧಿಸಿದ ನವಯುಗ್ ಕಂಪೆನಿಯ ಪ್ರಬಂಧಕ ಭಾನುಪ್ರಕಾಶ್ ಎಂಬವರು ಚರ್ಚೆ ನಡೆಸಿ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಆದರೆ ಅದಕ್ಕೂ ಒಪ್ಪದ ಪ್ರತಿಭಟನಾಕಾರರು ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಹಲವರು ಟೋಲ್ ಸಂಗ್ರಹಕ್ಕೆ ಅಡ್ಡಿಯನ್ನೂ ವ್ಯಕ್ತಪಡಿಸಿದಾಗ ಪೊಲೀಸರು ಅವರ ಮೇಲೆ ಲಘು ಲಾಠಿ ಚಾರ್ಜನ್ನು ನಡೆಸಿದರು. ಬಳಿಕ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿದ್ದಂತೆ ಸಂಜೆ 6 ಗಂಟೆಯವರೆಗೆ ಸ್ಥಳೀಯ ವಾಹನಗಳಿಗೆ ಸುಂಕ ಪಡೆಯುವುದಿಲ್ಲ. ಆನಂತರ ಚರ್ಚೆ ನಡೆಸಿದ ಬಳಿಕದ ತೀರ್ಮಾನ ತಿಳಿಸಲಾಗುವುದು ಅನ್ನುವ ಭರವಸೆ ನೀಡಿದ ಕೂಡಲೇ ಪ್ರತಿಭಟನಾಕಾರರು ಸಮಾಧಾನಗೊಂಡರು.
ಪ್ರತಿಭಟನೆಯಲ್ಲಿ ಮಂಜೇಶ್ವರದ ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್, ಯುವ ಕಾಂಗ್ರೆಸ್ ಅಧ್ಯಕ್ಷ ನಾಸರ್ ಮೊಗ್ರಾಲ್, ಕೇಶವ ಪ್ರಸಾದ್ ನಾಣಿಹಿತ್ತಿಲು, ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಸೈಫುಲ್ಲಾ ತಂಗಳ್, ಪಂಚಾಯತ್ ಅಧ್ಯಕ್ಷ ಅಝೀಝ್, ಮುಖ್ತಾರ್, ಇರ್ಷಾದ್, ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ಧಿಕ್ ತಲಪಾಡಿ, ಅರುಣ್ ಭಂಡಾರಿ, ಅಶ್ಪಕ್ ಕೆ.ಸಿ.ರೋಡ್, ಸಂಶುದ್ದೀನ್, ಕಾಂಗ್ರೆಸ್ ಮುಖಂಡರಾದ ಗಣೇಶ್ ಶೆಟ್ಟಿ ತಲಪಾಡಿ ರಕ್ಷಾ, ಗೋಪಾಲ್ ತಲಪಾಡಿ, ಪಿಯೂಷ್ ಕಲ್ಲಾಪು, ತಾ. ಪಂ. ಸದಸ್ಯ ಸಿದ್ಧಿಕ್ ಕೊಳಂಗೆರೆ, ಎಸ್ಡಿಪಿಐನ ಹ್ಯಾರಿಸ್ ಮಲಾರ್, ಲತೀಫ ಕೋಡಿಜಾಲ್, ಮೊಯ್ದಿನ್ ತಲಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಂಧಾನ ವಿಫಲ
ಸಂಜೆ 6 ಗಂಟೆಗೆ ಸಂಧಾನಕ್ಕೆ ಪ್ರತಿಭಟನಾಕಾರರನ್ನು ಆಹ್ವಾನಿಸಿದ್ದ ನವಯುಗ ಕಂಪೆನಿಯ ಪ್ರಬಂಧಕರು ಹಿರಿಯ ಅಧಿಕಾರಿಗಳು ಬರುವ ಭರವಸೆ ನೀಡಿದ್ದರು. ಆದರೆ ಅಧಿಕಾರಿಗಳು ಯಾರೂ ಬಾರದೇ ಇದ್ದುದರಿಂದ ದೂರವಾಣಿ ಮೂಲಕ ಪ್ರತಿಭಟನಾಕಾರರಲ್ಲಿ ಅಲ್ಲಿನ ಸಿಬ್ಬಂದಿ ಮಾತನಾಡಲು ತಿಳಿಸಿದ್ದು, ಅದರಂತೆ ಶಂಕರ್ ಎಂಬವರ ಜತೆಗೆ ಮಾತನಾಡಿದ ವೇಳೆ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅವರಿಂದ ಯಾವುದೇ ಬೇಡಿಕೆಗಳು ಈಡೇರುವುದಿಲ್ಲ ಅನ್ನುವ ಆರೋಪವನ್ನು ಮಾಡಿದ್ದಾರೆ.
ಏರಿದ ಬಸ್ಸಿನ ದರ
ಕೇರಳ ಮತ್ತು ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ತಲಪಾಡಿಯಲ್ಲಿ ಸುಂಕ ವಸೂಲಾತಿ ಆರಂಭದಿಂದಾಗಿ ಬಸ್ಸಿನ ಟಿಕೇಟ್ ದರದಲ್ಲಿಯೂ ಏರಿಸಲಾಗಿದೆ. ರೂ. 17 ರಿಂದ 18, 18 ರಿಂದ 21 ಏರಿಕೆಗೊಳಿಸಲಾಗಿದೆ. 2-3ರವರೆಗೆ ಟಿಕೇಟ್ ದರವನ್ನು ಏರಿಸಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಪಾಸ್ ಅವ್ಯವಸ್ಥೆ
ಟೋಲ್ ಪ್ಲಾಝಾದಲ್ಲಿರುವ ಪಾಸ್ ವಿತರಣೆ ಕೇಂದ್ರದಲ್ಲಿ ಪಾಸ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಯಿತು. ಸರತಿ ಸಾಲಿನಲ್ಲಿ ಪಾಸ್ ವಿತರಣೆ ಕೆಂದ್ರದ ಎದುರುಗಡೆ ವಾಹನ ಸವಾರರು ನಿಂತರೂ ಪಾಸ್ ವ್ಯವಸ್ಥೆಯನ್ನು ಟೋಲ್ ಸಿಬ್ಬಂದಿ ಕಲ್ಪಿಸಿಲ್ಲ. ಒಟ್ಟು ಅವ್ಯವಸ್ಥೆಯಿಂದ ಸಾರ್ವಜನಿಕರು ಸಂಕಷ್ಟಕ್ಕೀಡಾಗುವಂತಾಯಿತು.



























