ಉಳ್ಳಾಲ್ ನ್ಯೂಸ್ ನೆಟ್ ವರ್ಕ್


ಪಾನೀರ್: ವನಮಹೋತ್ಸವ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ, ಅದೊಂದು ನಿರಂತರ ಆಂದೋಲನ ಎಂದು ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಲಿಲ್ಲಿ ಪಿಂಟೋ ಅಭಿಪ್ರಾಯಪಟ್ಟರು.



ಭಾರತೀಯ ಕೆಥೋಲಿಕ್ ಯುವ ಸಂಚಲನ ಪಾನೀರ್ ಘಟಕದ ವತಿಯಿಂದ ಸಾಮಾಜಿಕ ಅರಣ್ಯ ವಲಯ ಹಾಗೂ ದ.ಕ.ಜಿಲ್ಲಾ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಪಾನೀರ್ ಚರ್ಚ್ ವಠಾರದಲ್ಲಿ ನಡೆದ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಆಚರಿಸಲಾಗುವಷ್ಟು ಹಬ್ಬಗಳು ಬೇರೆ ಯಾವುದೇ ದೇಶದಲ್ಲೂ ಇಲ್ಲ. ಅಂತಹ ಹಬ್ಬಗಳ ಪೈಕಿ ವನಮಹೋತ್ಸವ ಆಚರಣೆಯೂ ಒಂದಾಗಿದೆ. 1950 ರಿಂದ ಭಾರತದಲ್ಲಿ ವನಮಹೋತ್ಸವ ಆಚರಿಸಲಾಗುತ್ತಿದೆ. ಇಂದು ಮರಗಳನ್ನು ನಿರಂತರವಾಗಿ ಕಡಿಯಲಾಗುತ್ತಿದ್ದು ಇದರ ಪರಿಣಾಮವಾಗಿ ಮಳೆ ಪ್ರಮಾಣ ಕಡಿಮೆಯಾಗಿದೆ. ಹೀಗೇ ಮುಂದುವರಿದಲ್ಲಿ ಮುಂದೊಂದು ದಿನ ಅನ್ನಕ್ಕೂ ತಾತ್ಸಾರ ಪಡಬೇಕಾದ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಗಿಡಗಳನ್ನು ನೆಡುವ ಮೂಲಕ ಅರಣ್ಯ ಬೆಳೆಸುವುದರಿಂದ ಉತ್ತಮ ಪರಿಸರ ನಿರ್ಮಾಣ ಸಾಧ್ಯ. ಈ ಬಗ್ಗೆ ಅರಿವು ಮೂಡಿಸಬೇಕಿರುವು ಹಿನ್ನೆಲೆಯಲ್ಲಿ ಚರ್ಚ್‍ನಲ್ಲಿ ಸಸಿ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಪ್ರತೀ ವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಗಿದೆ ಎಂದು ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಹೇಳಿದರು.
ಪಾನೀರ್ ಚರ್ಚ್ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಫಿಲಿಪ್ ಡಿಸೋಜ, ಐಸಿವೈಎಂ ಪಾನೀರ್ ಘಟಕಾಧ್ಯಕ್ಷ ರೋನಿ ಫೆರಾವೊ, ವಾರ್ಡ್ ಅಧ್ಯಕ್ಷ ಸ್ಟ್ಯಾನಿ ಮೊಂತೆರೋ, ಕಾರ್ಯದರ್ಶಿ ರೋಶನ್ ರೋಡ್ರಿಗಸ್, ಸಂಚಾಲಕ ರೊನಾಲ್ಡ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.
ಐಸಿವೈಎಂ ಮಾಜಿ ಅಧ್ಯಕ್ಷ ಅಶ್ವಿನ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.