ಕೊಣಾಜೆ : ಇಂದಿನ ಆಧುನಿಕ ಕಾಲದ ಒತ್ತಡ, ಜಂಜಾಟದ ಬದುಕಿಗೆ ದೇವಾಲಯ, ಮಂದಿರಗಳು ನಮಗೆ ಏಕಾಗ್ರತೆಯೊಂದಿಗೆ ನೆಮ್ಮದಿ ಕೊಡುತ್ತದೆ. ಜ್ಞಾನಕ್ಕಿಂತ, ವಿದ್ಯೆಗಿಂತ ಮಿಗಿಲಾದುದು ಯಾವುದೂ ಇಲ್ಲ. ವಿದ್ಯೆಯ ಜೊತೆಗೆ ಸಂಸ್ಕೃತಿ, ಸಂಸ್ಕಾರದ ಅರಿವನ್ನು ಬೆಳೆಸಿಕೊಳ್ಳಬೇಕು. ಸತ್ಯ,ನ್ಯಾಯ, ನೀತಿಯೊಂದಿಗೆ ಧರ್ಮಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ ಎಂದು ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರು ಅವರು ಹೇಳಿದರು.
ಅವರು ಪಜೀರು ಸುದರ್ಶನ ನಗರದ ಶ್ರೀ ಕೃಷ್ಣ ಭಜನಾ ಮಂದಿರ(ರಿ) ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ 60 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪೂರ್ವಭಾವಿಯಾಗಿ ನಡೆದ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ದೈವೀ ಶಕ್ತಿಯೊಂದಿಗೆ ಮಾನವೀ ಶಕ್ತಿಯು ಇದ್ದಾಗ ಕ್ಷೇತ್ರವು ಬೆಳಗುತ್ತದೆ. ಬಹಳ ವರ್ಷದ ಇತಿಹಾಸ ಹೊಂದಿರುವ ಈ ಮಂದಿರದ ಮೂಲಕ ಸಾಮಾಜಿಕ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಾ ಬಂದಿರುವುದು ಮಹತ್ವದ ವಿಷಯವಾಗಿದೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕರಾದ ಕೆ.ಟಿ.ಸುವರ್ಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಳೆದ ಅರುವತ್ತು ವರ್ಷದಿಂದ ಪಜೀರು ಪರಿಸರದಲ್ಲಿ ಈ ಕೃಷ್ಣನ ಆರಾಧನೆ, ಮೊಸರು ಕುಡಿಕೆ ಕಾರ್ಯಕ್ರಮ ನಡೆಸುತ್ತಾ ಬಂದಿರುವುದು ಸುಲಭದ ಕೆಲಸವಲ್ಲ. ಇಲ್ಲಿಯ ಸಂಘಟನಾತ್ಮಕ ಕಾರ್ಯ ಮಾದರಿಯಾಗಿದೆ ಎಂದರು. ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಫೀಕ್ ಪಜೀರು ಮಾತನಾಡಿ, ಪಜೀರು ಪರಿಸರ ಸೌಹಾರ್ದತೆಯ ನೆಲ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಗಿಂತ ನಮ್ಮ ಪೂರ್ವರ ಕಾಲದಿಂದ ಬಂದಿರುವ ಕೆಲವು ಮೌಲ್ಯಯುತ ಆಚರಣೆ, ಸಂಸ್ಕೃತಿಯ ಮಹತ್ವವನ್ನು ಇಂದಿನ ಮಕ್ಕಳಿಗೆ ತಿಳಿಯಪಡಿಸುವ ಕಾರ್ಯ ಆಗಬೇಕಾಗಿದೆ. ನಾವು ಒಗ್ಗಟ್ಟಾಗಿ ಸಮಾಜನ್ನು ಕಟ್ಟುವ ಕೆಲಸ ಮಾಡೋಣ ಎಂದರು. ಮಂಗಳೂರು ವಿವಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ತರಾದ ಪ್ರೊ.ಸರೋಜಿನಿ , ಮಂಗಳೂರು ವಿವಿ ಉದ್ಯೋಗಿ ಮಂಗಳೂರು ವಿವಿ ಉದ್ಯೋಗಿ ಉಮಾವನಿತ ನಾಯಕ್, ಗ್ರಾಮಚಾವಡಿಯ ಯುವ ವಾಹಿನಿ ಘಟಕದ ಅಧ್ಯಕ್ಷರಾದ ಬಾಬು ಬಂಗೇರ ಮುಟ್ಟಿಂಜ, ಜಲಜಾಕ್ಷಿ ನಾರಾಯಣ ಗೌಡ ಕಂಬಳಪದವು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶ್ರೀ ಕೃಷ್ಣ ಭಜನಾ ಮಂದಿರದ ಮಾಜಿ ಅಧ್ಯಕ್ಷರು ಹಾಗೂ ಉರಗತಜ್ಞ ದಿಲೀಪ್ ರೈ ಅವರು ಸಮಾಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪಜೀರು ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ವಿಜೇತ್ ಪಜೀರು ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯದರ್ಶಿ ಮಿಥುನ್ ಕುಮಾರ್ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ನಿರ್ಮಲ್ ಭಟ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ನಡೆದ ಶ್ರೀ ಕೃಷ್ಸ ವೇಷ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಬಳಿಕ ಶ್ರೀ ಕೃಷ್ಣ ಯಕ್ಷಗಾನ ಮಂಡಳಿಯ ಸದಸ್ಯರಿಂದ ಶ್ರೀ ಕೃಷ್ಣ ಚರಿತ್ರಾಮೃತ ಯಕ್ಷಗಾನ ಪ್ರದರ್ಶನ ನಡೆಯಿತು.

