ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಮಹಿಳೆಯರಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸುವುದು ಮತ್ತು ಸಮಾಜದ ಅಸ್ಪ್ರಶ್ಯತೆಯನ್ನು ಹೋಗಲಾಡಿಸುವ ಉದ್ದೇಶದೊಂದಿಗೆ ಮುಡಿಪುವಿನ ಮುಡಿಪಿನ್ನಾರ್ ಕ್ಷೇತ್ರದ ವಠಾರದಲ್ಲಿ ಎ.19 ರಂದು ನಡೆಯಲಿರುವ ಕಾರ್ಯಕ್ರಮದ ಪೂರ್ವಭಾವಿಯಾಗಿ ನಿನ್ನೆ ಹವ್ಯೇಕ ಬ್ರಾಹ್ಮಣರ ಗುರಿಕಾರ ಹಾಗೂ ಮುಡಿಪುವಿನ ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್‍ನ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಅವರ ಮನೆಯಲ್ಲಿ ಕನ್ಯಾನ ಬಾಳೆಕೋಡಿಯ ಕಾಶೀ ಕಾಳ ಬೈರವೇಶ್ವರ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು.
ರಾಜಾರಾಮ ಭಟ್ ಅವರು ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರ ಪಾದಗಳಿಗೆ ಹಾಲಿನ ಅಭಿಷೇಕದೊಂದಿಗೆ ಪಾದಪೂಜೆಯನ್ನು ನೆರವೇರಿಸಿದರು. ಮನೆಯಲ್ಲಿ ಸೇರಿದ್ದ ನಾಗರಿಕರೆಲ್ಲರೂ ಸ್ವಾಮೀಜಿಯ ಪಾದಪೂಜೆಯನ್ನು ನೆರವೇರಿಸಿ ಆಶೀರ್ವಾದ ಪಡೆದರು. ಪಾದಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ಧರ್ಮಜಾಗೃತಿ ಸಮಿತಿಯ ಅಧ್ಯಕ್ಷ ನವೀನ್ ಪಾದಲ್ಪಾಡಿ, ಸಂದೇಶ್ ಎಂ, ದಿನಕರ್, ಜಯಂತ್, ಮುಂಡಾಜೆ ಬಾಲಕೃಷ್ಣ ರೈ ಮುಂತಾದ ಮುಖಂಡರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಶಿಕಾಂತ ಮಣಿ ಸ್ವಾಮೀಜಿಯವರು ಸಮಾಜದಲ್ಲಿರುವ ಅಸ್ಪ್ರಶ್ಯತೆಯನ್ನು ದೂರಗೊಳಿಸಬೇಕಾದರೆ ಸಮಾಜದ ತಳಮಟ್ಟದಿಂದ ಎಲ್ಲರೂ ಜಾಗೃತಿಯಾಗಬೇಕು. ಆದ್ದರಿಂದ ಸಮಾಜಮುಖಿ ಕಾರ್ಯಕ್ರಮದೊಂದಿಗೆ ನಾವೆಲ್ಲರೂ ಜತೆಯಾಗಿ ಮುನ್ನಡೆಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಘಟಕ ಟಿ.ಜಿ ರಾಜಾರಾಂ ಭಟ್ ಮಾತನಾಡಿ ಹಿಂದೂ ನಾವೆಲ್ಲರೂ ಒಂದು ಎಂದು ಹೇಳಿದರೆ ಸಾಲದು. ಎಲ್ಲರೂ ಅದನ್ನು ಕಾರ್ಯ ರೂಪಕ್ಕೆ ತರಬೇಕಾದ ಅನಿವಾರ್ಯತೆ ಇದೆ. ಇಂತಹ ಅಸ್ಪøಶ್ಯತೆಯನ್ನು ಹೋಗಲಾಡಿಸುವ ಮೂಲಕ ಹಿಂದೂಗಳ ಒಗ್ಗಟ್ಟನ್ನು ಪ್ರದರ್ಶಿಸಬಹುದು ಎಂದರು.
ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರ ಕೇವಲ ಒಂದು ಪಂಗಡದವರಿಗೆ ಮಾತ್ರ ಸೀಮಿತವಾಗಿರದೆ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡಿದ್ದು, ಜಿಲ್ಲೆಯ ವಿವಿದೆಡೆಯಿಂದ ಇವರಿಗೆ ಭಕ್ತರಿದ್ದಾರೆ ಎಂದು ಶಿಷ್ಯ ಮೂಲಗಳಿಂದ ತಿಳಿದುಬಂದಿದೆ.