ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ದಿನಗಳಿಂದ ಸುರಿಯದ ಮಳೆ ಏಕಾಏಕಿ ಸುರಿದಾಗ ಕುಂಪಲ ಪ್ರದೇಶಕ್ಕೆ ಹೋಗುವ ಮುಖ್ಯ ರಸ್ತೆ ಅಕ್ಷರಶಃ ದೋಣಿ ಸಾಗುವ ಹಾದಿಯಾಗಿ ತಿರುಗಿತ್ತು. ವಾಹನ ಸವಾರರು, ವಿದ್ಯಾರ್ಥಿಗಳು, ಪಾದಚಾರಿಗಳು ರಸ್ತೆ ಅವ್ಯವಸ್ಥೆಯಿಂದ ಪರದಾಡಬೇಕಾಯಿತು.
ರಾಷ್ಟ್ರೀಯ ಹೆದ್ದಾರಿ ೬೬ರಿಂದ ಕುಂಪಲ ಕ್ಕೆ ತೆರಳುವ ಕಾಂಕ್ರೀಟಿಕರಣ ರಸ್ತೆಯಿಡೀ ಮಳೆ ನೀರಿನಿಂದ ತುಂಬಿ ಹೋಗಿದೆ. ಗುರುವಾರ ಬೆಳಗ್ಗಿನಿಂದ ಸಂಜೆಯವರೆಗೂ ಸುರಿದ ಭಾರೀ ಮಳೆಯಿಂದಾಗಿ ಕುಂಪಲ ಬೈಪಾಸ್ ರಸ್ತೆ ಅವ್ಯವಸ್ಥೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು.೯ ಫೀಟ್ ಅಗಲ ರಸ್ತೆಯ ಎರಡು ಬದಿಗಳಲ್ಲಿ ತೆರೆದ ಚರಂಡಿಗಳಿವೆ. ಮಳೆಯ ಸಂದರ್ಭ ರಸ್ತೆಯಿಡೀ ಮಳೆಯ ನೀರು ಸೇರುವುದರಿಂದ ವಾಹನ ಸವಾರರು ಚರಂಡಿಗೆ ಬಿದ್ದಿರುವ ಉದಾಹರಣೆಗಳೂ ಇದೆ.ಸರಾಸರಿ ಆರು ಬಸ್ಸುಗಳ ಓಡಾಟ ಹಾಗೂ ನೂರಾರು ವಾಹನಗಳು ಇದೇ ಕಿರಿದಾದ ರಸ್ತೆಯಲ್ಲಿ ಹೋಗಬೇಕಿದೆ. ಅದೇ ಒಂದು ವಾಹನ ಚಾಲಕರಿಗೆ ಸಾಹಸವೆನಿಸಿದರೆ,ಮಳೆ ನೀರು ಸೇರಿದ ನಂತರ ರಸ್ತೆ ಹಾಗೂ ಚರಂಡಿ ವ್ಯತ್ಯಾಸ ತಿಳಿಯದೆ ಜೀವ ಕೈಲಿಟ್ಟು ಹೋಗಬೇಕಾದ ಅನಿವಾರ್ಯತೆ ಇದೆ ಎಂಬುದು ರಿಕ್ಷಾ ಚಾಲಕರ ಅಭಿಪ್ರಾಯ.
ರಸ್ತೆ ಅಗಲೀಕರಣ ನಡೆಸಲು ಈ ಭಾಗದಲ್ಲಿ ಖಾಸಗಿಯವರ ಕಂಪೌಂಡ್ ಅಡ್ಡಿಯಾಗುತ್ತಿದೆ. ರಸ್ತೆ ನಿಯಮಗಳನ್ನು ಪಾಲಿಸದೆ ಕಂಪೌಂಡ್ ಹಾಗೂ ಮನೆಯನ್ನು ನಿರ್ಮಿಸಲಾಗಿರುವುದರಿಂದ ರಸ್ತೆ ಅಗಲೀಕರಣ ಅಸಾಧ್ಯವಾಗಿದೆ. ರಸ್ತೆ ಬದಿಯಲ್ಲಿರುವ ಖಾಸಗಿ ಗದ್ದೆಯನ್ನು ಮಣ್ಣು ಹಾಕಿ ಮುಚ್ಚಿರುವುದರಿಂದ ನೀರು ಹೋಗಲು ಜಾಗವಿಲ್ಲದೆ, ಈಗ ರಸ್ತೆಯಲ್ಲೇ ಇಕ್ಕಟ್ಟಾಗುತ್ತಿದೆ. ಇದರಿಂದ ಕಿರಿದಾದ ರಸ್ತೆಯ ತೊಂದರೆ ಒಂದೆಡೆಯಾದರೆ, ಮಳೆ ನೀರು ಸೇರುವುದರ ಜತೆಗೆ ಸಂಚಾರಕ್ಕೆ ಅಯೋಗ್ಯವೆನಿಸಿದೆ ಅನ್ನುವ ಆರೋಪ ಸ್ಥಳೀಯರದ್ದಾಗಿದೆ.
ಕ್ರಮಕ್ಕೆ ಒತ್ತಾಯ:
ಲಕ್ಷಾಂತರ ಮಂದಿ ವಾಸಿಸುವ ಕುಂಪಲ ಪ್ರದೇಶ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರ ತವರೂರು ಆಗಿರುವುದರಿಂದ ಅವರೇ ಖುದ್ದು ಮುತುವರ್ಜಿ ವಹಿಸಿ ಸೋಮೇಶ್ವರ ಪಂಚಾಯಿತಿ ಸಹಕಾರದ ಜತೆಗೆ ಅಪಾಯವನ್ನು ಆಹ್ವಾನಿಸುವ ರಸ್ತೆಯ ಅವ್ಯವಸ್ತೆಯನ್ನು ಶೀಘ್ರ ಸರಿಪಡಿಸಬೇಕಿದೆ ಅನ್ನುವ ಒತ್ತಾಯ ತೊಂದರೆ ಎದುರಿಸಿದ ಜನರಿಂದ ಕೇಳಿಬಂದಿದೆ.